Published
1 year agoon
By
Akkare Newsಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ದಿನದ 24 ತಾಸು ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 113 ಕೋಟಿ ರೂ.ವೆಚ್ಚದ `ಜಲಸಿರಿ’ ಯೋಜನೆಯನ್ನು ಡಿಸೆಂಬರ್ ಕೊನೆಯಲ್ಲಿ ಮುಗಿಸಲೇ ಬೇಕು.ಪುತ್ತೂರು ಪಟ್ಟಣದೊಳಗೆ ಕುಡಿಯುವ ನೀರಿನ ಪೈಪ್ ಮೂಲಕ ಎಲ್ಲಾ ಮನೆಗಳಿಗೂ ನೀರಿನ ಸಂಪರ್ಕ ಆಗಬೇಕೆಂದು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಜಲಸಿರಿ ಪ್ರೊಜೆಕ್ಟ್ ಮೆನೇಜರ್ ಅವರಿಗೆ ಸೂಚನೆ ನೀಡಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಜಲಸಿರಿ ನೀರಿನ ವಿಚಾರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಅ.7ರಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಲಸಿರಿ ಕಾಮಗಾರಿ ಅನುಷ್ಠಾನಕ್ಕೆ 33 ತಿಂಗಳು ನೀಡಲಾಗಿತ್ತು. ಅನಂತರ 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. 8 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದೆ ಎನ್ನುವ ಒಪ್ಪಂದವಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿರುವ ಕುರಿತು ಶಾಸಕರು ಸದಸ್ಯರಿಂದ ಮಾಹಿತಿ ಪಡೆದುಕೊಂಡರು.ಈಗಾಗಲೇ ಗ್ರಾಮಾಂತರಕ್ಕೆ ಸಮಗ್ರ ನೀರಿನ ಯೋಜನೆಗೆ 1030 ಕೋಟಿ ರೂಪಾಯಿಯಲ್ಲಿ ಈಗಾಗಲೇ ಟೆಂಡರ್ ಆಗಿದೆ. ರೂ.760 ಕೋಟಿ ರೂಪಾಯಿಗೆ ಇನ್ನೊಂದು ಟೆಂಡರ್ ಆಗುತ್ತದೆ.ಮುಂದೆ ಕುಡಿಯುವ ನೀರಿನ ಕೊರತೆ ಆಗಬಾರದು ಎಂದು ಮಾಡಿರುವ ಯೋಜನೆ ಇನ್ನೂ ಪೂರ್ಣಗೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಡಿಸೆಂಬರ್ ತಿಂಗಳಲ್ಲಿ ನೀರು ಕೊಡುತ್ತೀರೋ ಇಲ್ಲವೋ ಎಂದು ಜಲಸಿರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಲರಿಸಿ ಕಾಮಗಾರಿ ಕೈಗೆತ್ತಿಕೊಂಡಿರುವ ಸುವೆಜ್ ಪ್ರೈವೆಟ್ ಸಂಸ್ಥೆಯ ಪ್ರೊಜೆಕ್ಟ್ ಮೆನೇಜರ್ ಪ್ರಮೋದ್ ಅವರು ಉತ್ತರಿಸಿ, ಈ ತಿಂಗಳೊಳಗೆ ಕಾಮಗಾರಿ ಕ್ಲಿಯರ್ ಆಗುತ್ತದೆ. ಡಿಸೆಂಬರ್ ತಿಂಗಳಿಂದ 8 ವರ್ಷ ನಿರ್ವಹಣೆ ಜವಾಬ್ದಾರಿ ಇದೆ ಎಂದರು.ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ 8 ವರ್ಷ ನಿರ್ವಹಣೆಯಲ್ಲಿ ಪೈಪ್ ಲೈನ್, ಓವರ್ ಟ್ಯಾಂಕ್, ಮೀಟರ್ ರೀಡಿಂಗ್ ಎಲ್ಲವನ್ನು ನೋಡುವುದು ಜಲಸಿರಿಯವರ ಜವಾಬ್ದಾರಿ ಎಂದರು.