ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಳ್ತಂಗಡಿ ಶಾಸಕರಿಂದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ -ತಾ|ಸರಕಾರಿ ನೌಕರರ ಸಂಘದಿಂದ ಖಂಡನೆ, ದೂರು

Published

on

ಪುತ್ತೂರು: ಸರಕಾರಿ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ವರ್ತನೆಗೆ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕು ಶಾಖೆಯಿಂದ ಖಂಡನೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಈ ಕುರಿತು ಅ.17 ರಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್‌ರವರಿಗೆ ದೂರು ಸಲ್ಲಿಸಿದ್ದಾರೆ.

 

 

ಅ.7 ರಿಂದ 9ರ ವರೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಸರ್ವೆ ನಂಬ್ರ 309ರಲ್ಲಿರುವ ಅಮ್ಮಿನಡ್ಕದ ನಿಡ್ಲೆ ವಿಸ್ತೃತ ಬ್ಲಾಕ್-2ರ ಮೀಸಲು ಅರಣ್ಯದಲ್ಲಿ 1963ನೇ ಕರ್ನಾಟಕ ಜಾಗವನ್ನು ಹಸನು ಮಾಡಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಕಳೆಂಜ ಗ್ರಾಮ ಅಮ್ಮಿನಡ್ಕ ಎಂಬಲ್ಲಿಯ ನಿವಾಸಿಯಾದ ಲೋಲಾಕ್ಷ ಗೌಡ ಎಂಬವರು ಅತಿಕ್ರಮಣ ಮಾಡಿದ್ದು, ಸದರಿ ಅತಿಕ್ರಮಣವನ್ನು ತೆರವುಗೊಳಿಸಲು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಹಾಗೂ ಸಿಬ್ಬಂದಿ ವರ್ಗ ವಿಚಾರಣೆ ನಡೆಸುತ್ತಿರುವಾಗ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಸದ್ರಿ ಮೀಸಲು ಅರಣ್ಯ ಸ್ಥಳಕ್ಕೆ ಏಕಾಏಕಿಯಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರಿಗೆ ಅರಣ್ಯ ಅತಿಕ್ರಮಣದ ಬಗ್ಗೆ ಅರಣ್ಯ ಅಧಿಕಾರಿಗಳು ಸವಿಸ್ತಾರವಾಗಿ ತಿಳಿಸಲಾಗಿದ್ದು, ಸದ್ರಿ ಪ್ರಕರಣದ ವಾಸ್ತವ ಸ್ಥಿತಿಯನ್ನು ಶಾಸಕರು ಅರಿತಿದ್ದರೂ ಸಹ ಏಕಾಏಕಿ ಶಾಸಕ ಹರೀಶ್ ಪೂಂಜಾರವರು ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕುವ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಮಾತ್ರವಲ್ಲ ಶಾಸಕ ಹರೀಶ್ ಪೂಂಜಾರವರು ಪದೇ ಪದೇ ದೂರವಾಣಿ ಕರೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಒತ್ತಡವನ್ನು ಹೇರಿರುತ್ತಾರೆ ಹಾಗೂ ಸಾರ್ವಜನಿಕವಾಗಿ ಅರಣ್ಯ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾನ ಹಾನಿ ಮಾಡಿರುವುದಾಗಿಯೂ, ಅಲ್ಲದೆ ಅರಣ್ಯ ಇಲಾಖೆ ಮತ್ತು ಅರಣ್ಯ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿ ಅರಣ್ಯ ಇಲಾಖೆ ಮೇಲೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಮುಂದುವರೆದು ಶಾಸಕ ಹರೀಶ್ ಪೂಂಜಾರವರು ಜನಪ್ರತಿನಿಧಿಯಾದ ನನ್ನನ್ನು ತಡೆಯಲು ಮಾನ್ಯ ಸ್ಪೀಕರ್‌ರವರ ಅನುಮತಿಯಿಲ್ಲದೆ ಏನೂ ಮಾಡಲಾಗುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಿ ಅರಣ್ಯ ಅತಿಕ್ರಮಣವನ್ನು ತಡೆಯಲು ಬಂದಿದ್ದ ಬೇರೆ ಬೇರೆ ತಾಲೂಕುಗಳ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸಹ ಬೆದರಿಕೆ ಒಡ್ಡಿರುತ್ತಾರೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾರವರೊಂದಿಗೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತೀತರರು ಉಪಸ್ಥಿತರಿರುತ್ತಾರೆ

Continue Reading
Click to comment

Leave a Reply

Your email address will not be published. Required fields are marked *

Advertisement