Published
1 year agoon
By
Akkare Newsಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಅಸಮಾಧಾನ ಸ್ಫೋಟಗೊಂಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಸಹಿತ ಮೂವರು ಹೊರ ನಡೆದಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಬಿಜೆಪಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹಾಗೂ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ತೆರಳಿ ಸಭೆಯನ್ನು ತಿರಸ್ಕರಿಸಿದ್ದಾರೆ.
ಹೊರಗೆ ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ‘ಹೊರಗೆ ಚಹಾ ಕುಡಿದು ಬರ್ತೀವಿ’ ಎಂದಾಗ ‘ಇಲ್ಲಿ ಚಹಾ ಇಲ್ಲವೇ?’ ಎಂದು ಮಾಧ್ಯಮದವರು ಮರು ಪ್ರಶ್ನೆ ಹಾಕಿದರು.
ವಿಪಕ್ಷ ನಾಯಕನಾಗಿ ಆರ್.ಅಶೋಕ್ ಅವರ ಹೆಸರು ಬಹುತೇಕ ಖಚಿತಗೊಂಡ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಳ್ಳುವ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಭಾಗವಹಿಸಿದ್ದಾರೆ.
ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ: ಅರವಿಂದ್ ಬೆಲ್ಲದ್
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್ ವೀಕ್ಷಕರ ಸಭೆ ನಡೆಸಿದ್ದು, ಈ ವೇಳೆ ಯತ್ನಾಳ್ ಸೇರಿದಂತೆ ಬೆಲ್ಲದ್ ಅವರು ಹೊರ ಬಂದಿದ್ದಾರೆ.
ಈ ವೇಳೆ ಮಾತನಾಡಿದ ಅವರು ‘ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಶಾಸಕರಿದ್ದಾರೆ. ಇನ್ನು ಏನೂ ನಿರ್ಧಾರ ಆಗಿಲ್ಲ’ ಎಂದು ಅರವಿಂದ್ ಬೆಲ್ಲದ್ ತಿಳಿಸಿದರು.