Published
12 months agoon
By
Akkare Newsಬಂಟ್ವಾಳ, ಜ.11: ನಾಲ್ವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ತಾಯಿ, ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ನಗ- ನಗದನ್ನು ದರೋಡೆಗೈದ ಘಟನೆ ಬೆಳ್ಳಂಬೆಳಗ್ಗೆ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಫ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ. ಮನೆಯಲ್ಲಿ ತಾಯಿ ಫ್ಲೋರಿನ್ ಪಿಂಟೊ ಮತ್ತು ಅವರ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರು.
ಮನೆಯಲ್ಲಿ ಬೇರೆ ಯಾರೂ ಇಲ್ಲವೆಂದು ತಿಳಿದಿದ್ದವರೇ ರಾಬರಿ ನಡೆಸಿದ್ದಾರೆ. ಕಪಾಟಿನಲ್ಲಿರಿಸಿದ್ದ ಸುಮಾರು ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ, 30 ಸಾವಿರ ರೂ. ನಗದು ಹಾಗೂ ಒಟ್ಟು ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ನಗ- ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಸುಮಾರು 6.30ರ ವೇಳೆಗೆ ಕಾಲಿಂಗ್ ಬೆಲ್ ಹಾಕಿದ್ದು ಬಾಗಿಲು ತೆಗದ ಕೂಡಲೇ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ಚಿನ್ನ, ನಗದು ತೆಗೆದು ಕೊಡುವಂತೆ ಬೆದರಿಸಿದ್ದಾರೆ.
ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದು ಕಪಾಟು ಬೀಗದ ಕೀ ಪಡೆದಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ಆಸ್ಟಿನ್ ಪಿಂಟೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.