ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಬಿರುಮಲೆಬೆಟ್ಟ ಪ್ರವಾಸಿತಾಣವಾಗಿಸಲು ಸರಕಾರದಿಂದ ರೂ.2.50 ಕೋಟಿ ಬಿಡುಗಡೆ’ ಬಿರುಮಲೆ ಬೆಟ್ಟದಲ್ಲಿ ನಡೆದ ಬಿರುಮಲೋತ್ಸವದಲ್ಲಿ ಶಾಸಕ ಅಶೋಕ್‌ ಕುಮಾ‌ರ್ ರೈ

Published

on

ಪುತ್ತೂರು: ಬಿರುಮಲೆ ಬೆಟ್ಟವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಬೇಕೆನ್ನುವ ಪರಿಕಲ್ಪನೆ ಇದೆ. ಈಗಾಗಲೇ ರೂ.2.50 ಕೋಟಿ ಹಣವು ಸರಕಾರದಿಂದ ಬಿಡುಗಡೆಯಾಗಿದ್ದು ಮುಂದಿನ 15-20 ದಿನಗಳಲ್ಲಿ ಟೆಂಡರ್ ಆಗುವ ಕೆಲಸವಾಗಬೇಕಿದೆ. ಆದ್ದರಿಂದ ಬಿರುಮಲೆ ಬೆಟ್ಟವನ್ನು ರಮಣೀಯವನ್ನಾಗಿಸಿ ಪ್ರೇಕ್ಷಕರ ಪ್ರವಾಸಿತಾಣವನ್ನಾಗಿ ಮಾರ್ಪಡಿಸುವುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಫೆ.3ರಂದು ಬಿರುಮಲೆ ಬೆಟ್ಟದಲ್ಲಿ ಜರಗಿದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಬಿರುಮಲೋತ್ಸವ-2024′ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು.


ಪುತ್ತೂರಿನಲ್ಲಿ ಯಾವುದೇ ಆಕರ್ಷಣೀಯ ತಾಣಗಳು ಕಾಣ ಸಿಗದಿರುವುದರಿಂದ ಯಾತ್ರಿಕರು ಸುಬ್ರಹ್ಮಣ್ಯ, ಧರ್ಮಸ್ಥಳದತ್ತ ಸಾಗುತ್ತಿದ್ದಾರೆ ಪುತ್ತೂರಿನ ಎತ್ತರದ ಪ್ರದೇಶವಾದ ಈ ಬಿರುಮಲೆ ಬೆಟ್ಟ ಪ್ರವಾಸಿತಾಣವನ್ನಾಗಿ ಮಾಡಿ ಪ್ರವಾಸಿಗರು ಪುತ್ತೂರಿನತ್ತ ಮುಖ ಮಾಡುವುದು ನನ್ನ ಉದ್ದೇಶವಾಗಿದೆ. ಆದ್ದರಿಂದ ಮೂಡಬಿದ್ರೆಯ ಲೈಟಿಂಗ್ ಕಂಪೆನಿಯವರು ಬಿರುಮಲೆ ಬೆಟ್ಟದಲ್ಲಿ ಬೃಹತ್ ಕಲರ್‌ಫುಲ್ ಲೈಟಿಂಗ್ ಸ್ಟೀನ್ ಅಳವಡಿಸುವ ಕಾರ್ಯ ಯೋಜನೆಯನ್ನು ಈಗಾಗಲೇ ಸಿದ್ಧಗೊಳಿಸಿದ್ದಾರೆ ಎಂದ ಅವರು ರೂ. 10 ಲಕ್ಷ ವೆಚ್ಚದಲ್ಲಿ ಬಿರುಮಲೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಯ ಅಗಲೀಕರಣ, ಭಯದ ವಾತಾವರಣವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಿನವಿಡೀ ಪೊಲೀಸ್ ಚೌಕಿಯ ನಿರ್ಮಾಣ ಜೊತೆಗೆ ಬೆಟ್ಟವನ್ನು ಸೌಂದರೀಕರಣಗೊಳಿಸುವ ವಿವಿಧ ಕೆಲಸ ಕಾರ್ಯಗಳು ಮಾಡಲಿಕ್ಕಿದೆ. ಒಟ್ಟಾರೆಯಾಗಿ ಬಿರುಮಲೆ ಬೆಟ್ಟವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಬೇಕು ಮತ್ತು ಹೆಚ್ಚೆಚ್ಚು ಪ್ರವಾಸಿಗಳು ಬಿರುಮಲೆ ಬೆಟ್ಟದತ್ತ ಬರಬೇಕು ಎನ್ನುವುದೇ ನನ್ನ ಉದ್ದೇಶವಾಗಿದೆ ಎಂದರು.




ಪ್ರವಾಸಿತಾಣವನ್ನಾಗಿಸಲು ಶಾಸಕರೊಂದಿಗೆ ಕೈಜೋಡಿಸಲಿದ್ದೇವೆ-ಮೊಹಾಪಾತ್ರ:
ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಪುತ್ತೂರು ನಗರದಲ್ಲಿ ಅತೀ ಹೆಚ್ಚು ಎತ್ತರದ ಪ್ರದೇಶವೆಂದರೆ ಈ ಬಿರುಮಲೆ ಬೆಟ್ಟ. ಇಲ್ಲಿಂದ ನೋಡಿದರೆ ಇಡೀ ಪುತ್ತೂರೇ ಕಾಣ ಸಿಗುತ್ತಿರುವುದು ಈ ಬಿರುಮಲೆ ಬೆಟ್ಟದ ವೈಶಿಷ್ಟ್ಯತೆ ಶಾಸಕರು ಈ ಬಿರುಮಲೆ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದು ತಾಲೂಕು ಹಾಗೂ ಜಿಲ್ಲಾಡಳಿತವು ಶಾಸಕರೊಂದಿಗೆ ಕೈಜೋಡಿಸಲಿದ್ದೇವೆ ಎಂದ ಅವರು ಗಾಳಿಪಟ ಹಾರಿಸುವ ಕ್ರೀಡೆಗೆ ಮೂರು ಸಾವಿರದ ಇತಿಹಾಸವಿದೆ. 1927ರಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಜನರ ಮೇಲಿನ ಆಕ್ರಮಣಕ್ಕೋಸ್ಕರ ಸೈಮನ್ ಕಮಿಷನ್ ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಈ ಬ್ರಿಟಿಷ್ ಕಾನೂನನ್ನು ವಿರೋಧಿಸಲು ಮಹಾತ್ಮ ಗಾಂಧೀಜಿಯವರು ಗಾಳಿಪಟವನ್ನು ಹಾರಿಸಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಪ್ರಸ್ತುತ ಈ ಗಾಳಿಪಟ ಹಾರಿಸುವುದು ಮನರಂಜನೆಯ ಕ್ರೀಡೆಯಾಗಿದ್ದು ಹೇಗೆ ಗಾಳಿಪಟವು ಗಾಳಿಯೊಂದಿಗೆ ಎತ್ತರಕ್ಕೆ ಏರುತ್ತಿದ್ದು ಹಾಗೆಯೇ ವಿದ್ಯಾರ್ಥಿಗಳು ಕೂಡ ಕಲಿಕೆಯೊಂದಿಗೆ ಎತ್ತರಕ್ಕೆ ಸಾಗುವಂತಾಗಲಿ ಎಂದರು.

ಗಾಳಿಪಟ ಸ್ಪರ್ಧೆಯ ಫಲಿತಾಂಶ;
ಪ್ರಾಥಮಿಕ ವಿಭಾಗ:ಜಿಶಾ ರೈ(ಪ್ರ), ಅಲನ್ ಜೋಸ್ಟನ್ ಡಿ’ಸೋಜ(ದ್ರಿ), ಅರ್ಲಿನ್ ಜೋವಿಲ್ ಡಿ’ಸೋಜ (ಪ್ರೋತ್ಸಾಹಕ), ಹೈಸ್ಕೂಲ್ ವಿಭಾಗ ನಿಖಿಲ್ ಜೆ.ಎನ್(ಪ್ರ), ಪೂಜಿತ್ ಎಸ್.ಕೆ(ದ್ರಿ), ಕಾಲೇಜು ವಿಭಾಗ:ವಿವೇಕ(ಪ್ರ), ಪ್ರಮೋದ್ (ದ್ರಿ), ಮುಕ್ತ ಕೆಟಗರಿ ವಿಭಾಗ:ರಾಘವ(ಪ್ರ), ಸಾಯಿರಾಮ್ ರಾವ್(ದ್ವಿ), ಸ್ಥಳದಲ್ಲಿ ತಯಾರಿಸಿ ಹಾರಿಸಿದ ಗಾಳಿಪಟ:ಮಲ್ಲಣ್ಣ ಗೌಡ (ಪ್ರ), ಅತ್ಯುತ್ತಮ ವಿನ್ಯಾಸದ ಗಾಳಿಪಟ ಪೂಜಿತ್(ಪ್ರ), ಅತ್ಯುತ್ತಮ ಎತ್ತರದಲ್ಲಿ ಹಾರಿಸಿದ ಗಾಳಿಪಟ ಶೋಭಾ(ಪ್ರ), ಚಿಂತನ್ ರೈ(ದ್ವಿ), ಮನಿಷ್/ಹೆರಾಲ್ಡ್ ಮಾಡ್ತಾ(ಪ್ರೋತ್ಸಾಹಕ) ಬಹುಮಾನವನ್ನು ನೀಡಲಾಯಿತು. ವಿಶೇಷ ಆಕರ್ಷಣೆಯಾಗಿ ಗಾಳಿಪಟ ಸ್ಪರ್ಧೆಯಲ್ಲಿ ಗರುಡ ಪಕ್ಷಿಯ ಚಿತ್ರವುಳ್ಳ ಗಾಳಿಪಟ ಕಂಡು ಬಂತು. ಈ ಸ್ಪರ್ಧೆಯಲ್ಲಿ ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ನಾಯ್ಕರವರು ಸಹಕಾರ ನೀಡಿರುತ್ತಾರೆ.





ಸ್ವಾದಿಷ್ಟ ತಿನಸುಗಳ ಫುಡ್‌ಕೋರ್ಟ್:
ಬಿರುಮಲೆಬೆಟ್ಟದಲ್ಲಿನ ರಮಣೀಯ ತಾಣದಲ್ಲಿ ವಿವಿಧ ಸ್ವಾದಿಷ್ಠ ತಿಂಡಿ ತಿನಸುಗಳ ಫುಡ್ ಕೋರ್ಟ್‌ ಮಳಿಗೆಯನ್ನು ತೆರೆದು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ಕಾರ್ಯಕ್ರಮವನ್ನು ಆಹ್ಲಾದಿಸುವಂತೆ ಮಾಡಿದೆ. ಕಾರ್ಯಕ್ರಮಕ್ಕೆ ಮಕ್ಕಳು, ಹಿರಿಯರೊಂದಿಗೆ ಆಗಮಿಸಿದ ಕುಟುಂಬಕ್ಕೆ ಫುಡ್ಕೋರ್ಟ್ ಮಳಿಗೆಯು ವಿಶೇಷ ಉತ್ತೇಜನ ನೀಡಿದಂತಿತ್ತು. ಫುಡ್ ಕೋರ್ಟ್‌ನಲ್ಲಿ ಮರಿಕೇಶ್ ಆರ್ಗ್ಯಾನಿಕ್ ಐಸ್ ಕ್ರೀಂ, ಗುಜರಾತ್ ಫುಡ್ ಕಾರ್ನರ್. ಮನೆಯಲ್ಲಿ ಬೆಳೆಸಿದ ಅಣಬೆಯಿಂದ ಶುಚಿಯಾಗಿ ತಯಾರಿಸಿದ ಕಟ್ಟೇಟ್ ಮತ್ತು ಮೊಮೋಸ್ ‘ಅಮ್ಮ ಮನ್ಸೂಮ್, ಪುತ್ತೂರ್ದ ಮುತ್ತು ಚರುಂಬುರಿ, ಪುತ್ತೂರ್ದ ಮುತ್ತು ಸ್ವೀಟ್ ಕಾರ್ನ್, ಕಲರ್ ಬಾಲ್ ಗೇಮ್ ಗಮನ ಸೆಳೆದವು.

ಕರೋಕೆ ಹಾಡುಗಳು/ಸಾಂಸ್ಕೃತಿಕ ಕಾರ್ಯಕ್ರಮ:
ಒಂದೆಡೆ ಗಾಳಿಪಟ ಸ್ಪರ್ಧೆ, ಮತ್ತೊಂದೆಡೆ ಫುಡ್ಕೋರ್ಟ್ ನಡೆಯುತ್ತಿದ್ದಾಗ ಇತ್ತ ವೇದಿಕೆಯಲ್ಲಿ ಸುರೇಶ್ ಶೆಟ್ಟಿ ಇವೆಂಟ್ಸ್ ಆಂಡ್ ಮ್ಯಾನೇಜ್‌ಮೆಂಟ್‌ನ ಸುರೇಶ್‌ರವರ ನೇತೃತ್ವದಲ್ಲಿ ಕರೋಕೆ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಪ್ರೇಕ್ಷಕರ ಮನ ತಣಿಸಿದವು. ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳು, ಹಿಂದಿ, ಕನ್ನಡ ಚಲನಚಿತ್ರ ಗೀತೆಗಳು, ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹಾಡುಗಾರರು ಹಾಡುವ ಮೂಲಕ ಹಾಡುಗಾರರಿಗೆ ಒಂದು ವೇದಿಕೆಯನ್ನು ನಿರ್ಮಿಸಿಕೊಡುವ ಮೂಲಕ ಹಾಡುಗಾರರನ್ನು ಹುರಿದುಂಬಿಸುವ ಕಾರ್ಯ ಅಲ್ಲಿ ನಡೆದಿತ್ತು ಎನ್ನಬಹುದು.

ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯದರ್ಶಿ ಎಂ.ಎಸ್ ಅಮ್ಮಣ್ಣಾಯರವರು ಪ್ರಾರ್ಥಿಸಿದರು. ಅಧ್ಯಕ್ಷ ಎ.ಜಗಜೀವನ್ ದಾಸ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಝೇವಿಯರ್ ಡಿ’ಸೋಜ, ಜೊತೆ ಕಾರ್ಯದರ್ಶಿ ನಿತಿನ್ ಪಕ್ಕಳ, ಡಾ.ರವೀಂದ್ರ, ಮನೋಜ್ ಶಾಸ್ತ್ರಿ ಸಂತೋಷ್ ಶೆಟ್ಟಿ, ರಘುನಾಥ್ ರಾವ್, ಎ.ಜಯಪ್ರಕಾಶ್ ರೈ ಉಪಸ್ಥಿತರಿದ್ದರು. ಕೋಶಾಧಿಕಾರಿ ದತ್ತಾತ್ರೇಯ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
ಅಂತರಾಷ್ಟ್ರೀಯ ಗಾಳಿಪಟ ಸ್ಪರ್ಧೆಯು ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದ್ದು ಮಾತ್ರವಲ್ಲ ಬಿರುಮಲೋತ್ಸವ ಗಾಳಿಪಟ ಸ್ಪರ್ಧೆಗೆ ಸ್ಫೂರ್ತಿಯಾಗಿರುವ ಮಾರ್ಗದರ್ಶಕರೂ ಆಗಿರುವ ದಿನೇಶ್ ಹೊಳ್ಳರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಾಳಿಪಟ ಎನ್ನುವುದು ಬದುಕಿನ ಸಾಂಕೇತಿಕ ರೂಪವಾಗಿದೆ. ಗಾಳಿಪಟವನ್ನು ಎತ್ತರಕ್ಕೆ ಹಾರಿಸುವಾಗ ಹೇಗೆ ಗೋತಾ ಹೊಡೆಯುತ್ತಾ ಗಾಳಿಯ ಹಾಗೂ ದಾರದ ಸಹಾಯದಿಂದ ಮತ್ತೇ ಮೇಲೆ ಮೇಲೆ ಏರುತ್ತದೆಯೋ ಹಾಗೆಯೇ ಬದುಕಿನಲ್ಲಿ ಕೂಡ. ಯಶಸ್ಸಿನ ಹಾದಿಯಲ್ಲಿ ಅಡೆ ತಡೆಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸಿನ ಸೂತ್ರವನ್ನು ಹಿಡಿದುಕೊಂಡು ಮುಂದುವರೆಯುತ್ತಾರೋ ಅವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ ಎಂದು ಸನ್ಮಾನಿತ ದಿನೇಶ್ ಹೊಳ್ಳರವರು ಹೇಳಿದರು.

ಬಿರುಮಲೆ ಬೆಟ್ಟ ಸುಂದರವಾಗಿ ಕಾಣಬೇಕು..
ನಿವೃತ್ತ ತಹಶೀಲ್ದಾರ್ ದಿ.ಕೋಚಣ್ಣ ರೈಯವರು ಬಿರುಮಲೆ ಬೆಟ್ಟದ ಕನಸನ್ನು ಹುಟ್ಟು ಹಾಕಿದವರು. ಪುತ್ತೂರಿನ ಶಾಸಕರು ಪುತ್ತೂರು ಕ್ಷೇತ್ರಕ್ಕೆ ಮೀಸಲಿಟ್ಟ ಧೀಮಂತ ವ್ಯಕ್ತಿ ಎನ್ನುವುದು ಇತ್ತೀಚೆಗಿನ ಬೆಂಗಳೂರು ಕಂಬಳದಲ್ಲಿ ಸಾಬೀತಾಗಿದೆ. ಬಿರುಮಲೆ ಬೆಟ್ಟ ಟೂರಿಸ್ಟ್ ಪ್ರೇಕ್ಷಣೀಯ ಸ್ಥಳ ಆಗಬೇಕು ಎನ್ನುವ ನಮ್ಮ ಆಶಯಕ್ಕೆ ಕೂಡಲೇ ಶಾಸಕ ಅಶೋಕ್ ರೈಯವರು ಯೋಜನೆಯನ್ನು ಸಿದ್ದಗೊಳಿಸಿದ್ದಾರೆ. ಅದರಂತೆ ಬಿರುಮಲೆ ಬೆಟ್ಟ ಸುಂದರವಾಗಿ ಎಲ್ಲರಿಗೂ ಕಾಣಬೇಕು ಎನ್ನುವ ಆಶಯದಿಂದ ಕಲರ್ ಲೈಟ್ಸ್ ಅನ್ನು ಅಳವಡಿಸೋದು, ಶಾಸಕರೊಂದಿಗೆ ಸಹಾಯಕ ಆಯುಕ್ತರೂ ಕೂಡ ಕೈಜೋಡಿಸಲಿದ್ದಾರೆ. -ಎ.ಜೆ ರೈ, ಅಧ್ಯಕ್ಷರು, ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement