Published
11 months agoon
By
Akkare Newsವಿಟ್ಲ: ಯುವಕನೋರ್ವನ ಮನೆ ಮಂದೆ ಯುವತಿಯೋರ್ವಳು ಮೊಕ್ಕಾಂ ಹೂಡಿರುವ ಘಟನೆಯೊಂದು ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ.6 ರಂದು ನಡೆದಿದೆ. ಯುವಕ ನನ್ನ ಜೊತೆ ಪ್ರೀತಿಸುವ ನಾಟಕವಾಡಿದ್ದಾಗಿ ಯುವತಿ ಆರೋಪ ಮಾಡಿರುವ ಕುರಿತು ವರದಿಯಾಗಿದೆ.ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಮನವೊಲಿಸಲು ಪ್ರಯತ್ನ ಪಟ್ಟಿದ್ದರೂ ವಿಫಲರಾಗಿ ಕೊನೆಗೆ ಆಕೆಯನ್ನು ರಾತ್ರಿ ವೇಳೆ ಠಾಣೆಗೆ ಕರೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ಸಂಸ್ಥೆಯೊಂದನ್ನು ನಡೆಸುತ್ತಿರುವ ಯುವತಿಯು ಉತ್ತರ ಭಾರತದ ಮೂಲದವಳು. ಬೆಂಗಳೂರಿನಲ್ಲಿ ಈಕೆಗೆ ಅಡ್ಯನಡ್ಕದ ಯುವಕನೋರ್ವನ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಇವರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎನ್ನಲಾಗಿದೆ.
ಹೀಗಾಗಿ ಇಂದು ಸಂಜೆ ಅಡ್ಯನಡ್ಕ ಮನೆಗೆ ಯುವತಿ ಬಂದಿದ್ದು, ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ, ಈಗ ಹಣ ವಾಪಸ್ಸು ನೀಡದೆ ವಿವಾಹ ಕೂಡಾ ಆಗದೇ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಯುವಕ ಯುವತಿ ಭಿನ್ನ ಕೋಮಿಗೆ ಸೇರಿದವರೆಂಬ ಮಾಹಿತಿ ಕೂಡಾ ಈ ಸಂದರ್ಭದಲ್ಲಿ ಹಬ್ಬಿದ್ದು, ಅಡ್ಯನಡ್ಕ ಪೇಟೆಯಲ್ಲಿ ಎರಡು ಕೋಮಿನ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಘಟನೆ ಕೂಡಾ ನಡೆದಿತ್ತು.
ಊರವರು ಯುವತಿ ಹಣಕಾಸಿನ ನಷ್ಟವನ್ನು ಭರಿಸಿಕೊಡುವುದಾಗಿ ಹೇಳಿದರೂ ಯುವತಿ ಒಪ್ಪದ ಕಾರಣ, ಯುವಕನೇ ಬೇಕೆಂದು ಹಠಕ್ಕೆ ಬಿದ್ದಿದ್ದಳು ಎಂದು ಮಾಧ್ಯವೊಂದು ವರದಿ ಮಾಡಿದೆ. ನಂತರ ರಾತ್ರಿ ಆಕೆಯನ್ನು ವಿಟ್ಲ ಠಾಣೆಗೆ ಕರೆದುಕೊಂಡು ಹೋಗಿದ್ದಾಗಿ ವರದಿಯಾಗಿದೆ.ವರದಿಯ ಪ್ರಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಯುವಕ ಮನೆಗೆ ಸಂತ್ರಸ್ತ ಯುವತಿ ಐದು ಬಾರಿ ಬಂದಿರುವುದಾಗಿ ಹೇಳಲಾಗಿದೆ. ಯುವತಿ ಬಂದಿರುವುದನ್ನು ಕಂಡು ಒಂದು ಬಾರಿ ಯುವಕ ಹಿಂಬಾಗಿಲಿನಿಂದಲೇ ಪರಾರಿಯಾಗಿರುವುದಾಗಿ ಸ್ಥಳೀಯರು ತಿಳಿಸಿರುವುದಾಗಿ ವರದಿಯಾಗಿದೆ.