ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಪ್ರಧಾನಮಂತ್ರಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಯವರೇ ತಾವು ಮುಖ್ಯಮಂತ್ರಿಯಾದಾಗ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ್ದು ನೆನಪಿಲ್ಲವೇ !!!?

Published

on

ಬೆಂಗಳೂರು: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ‌ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತುತ್ತಿದ್ದರು. ಆಗ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ನಾವು ಕನ್ನಡಿಗರಿಗೆ ನ್ಯಾಯಯುತ ಪಾಲು ಕೊಡಿ ಎಂದು ಕೇಳುವಾಗ ಯಾಕೆ ಎದುರಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಅಲ್ಲದೆ, ಈಗ ನಾಡಿಗೆ ಅನ್ಯಾಯ ಆಗುತ್ತಿಲ್ಲ ಎಂದು ಮಾತನಾಡುತ್ತಿರುವ ಬೊಮ್ಮಾಯಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಹಿಂದೆ ಆಡಿದ ಮಾತುಗಳ ಪುರಾವೆ ನೀಡಿದ ಸಿಎಂ, ಅವುಗಳನ್ನು ಒಮ್ಮೆ ನೋಡಿ ಎಂದು ಕುಟುಕಿದ್ದಾರೆ.ಈ ಸಂಬಂಧ ತಮ್ಮ ಫೇಸ್ ಬುಕ್ ಹಾಗು Xನಲ್ಲಿ ಬರೆದಿರುವ ಸಿಎಂ ಸಿದ್ದರಾಮಯ್ಯ, ಮೋದಿ ಅವರ ಎರಡು ಮುಖಗಳನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದಾರೆ.

ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರ್ಕಾರ ನಡೆಸಿದ್ದ ‘’ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ.
ಇದೇ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಹೇಳಿಕೆಗಳು ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ದಯವಿಟ್ಟು ಉತ್ತರ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ನರೇಂದ್ರ ಮೋದಿ ಅವರಾಗಿದ್ದಾರೆ ಎಂದ ಸಿದ್ದರಾಮಯ್ಯ, ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ ‘’ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಪ್ರಶ್ನಿಸಿದ್ದರು ಎಂದು ನೆನಪಿಸಿದ್ದಾರೆ.2008ರಲ್ಲಿ ವಡೋದರಾದ ಸಮಾರಂಭದಲ್ಲಿ ಮಾತನಾಡುತ್ತಾ ‘ಗುಜರಾತ್ ರಾಜ್ಯ ಪ್ರತಿವರ್ಷ ರೂ.40,000 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸುತ್ತಿದೆ. ಅದರಲ್ಲಿ ಕೇವಲ ಶೇಕಡಾ 2.5ರಷ್ಟು ಮಾತ್ರ ರಾಜ್ಯಕ್ಕೆ ವಾಪಸು ನೀಡಲಾಗುತ್ತದೆ. ಇಷ್ಟು ಜುಜುಬಿ ಮೊತ್ತವನ್ನು ವಾಪಸು ನೀಡುವ ಬದಲಿಗೆ ಒಂದು ವರ್ಷದ ಅವಧಿಗೆ ನಮ್ಮ ತೆರಿಗೆಯನ್ನು ನಾವೇ ಬಳಸಿಕೊಳ್ಳಲು ಅವಕಾಶ ನೀಡಬಾರದೇಕೆ ಎಂದು ಕೇಂದ್ರ ಸರ್ಕಾರದ ಅಸ್ತಿತ್ವನ್ನೇ ಪ್ರಶ್ನಿಸಿದ್ದರು ಎಂದೂ ಸಿದ್ದರಾಮಯ್ಯ ನೆನಪಿಸಿದ್ದಾರೆ.





ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಜನವರಿ ಒಂಭತ್ತರಂದು ನಡೆದಿದ್ದ ಹತ್ತನೇ ಪ್ರವಾಸಿ ಭಾರತೀಯ ಸಮ್ಮೇಳನದಲ್ಲಿ ಮಾತನಾಡುತ್ತಾ ಮೋದಿ ‘ಕೇಂದ್ರ ಸರ್ಕಾರ ಇಲ್ಲವೆ ಪ್ರಧಾನಮಂತ್ರಿಯವರಿಂದ ನಮಗೆ ಚಿಕ್ಕಾಸಿನ ನೆರವು ಸಿಗುತ್ತಿಲ್ಲ. ನಾವು ನಮ್ಮ ಸಂಪನ್ಮೂಲವನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ವಿದೇಶಿ ಗಣ್ಯರಿದ್ದ ವೇದಿಕೆಯಲ್ಲಿಯೇ ದೂರಿದ್ದರು ಎಂಬುದನ್ನೂ ಸಿದ್ದರಾಮಯ್ಯ ನೆನಪಿಸಿದ್ದಾರೆ.ಹದಿನಾಲ್ಕನೇ ಹಣಕಾಸು ಆಯೋಗದ ಜೊತೆಗಿನ ಮಾತುಕತೆಯಲ್ಲಿ ಇದೇ ನರೇಂದ್ರ ಮೋದಿಯವರು ‘ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸುವ ತೆರಿಗೆಯಲ್ಲಿ ಕನಿಷ್ಠ ಶೇಕಡಾ 32 ರಿಂದ 50ರ ವರೆಗೆ ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ಮೋದಿ ವಾದಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.ತೆರಿಗೆ ಹಂಚಿಕೆಗೆ ಅನುಸರಿಸಲಾಗುತ್ತಿರುವ ಮಾನದಂಡವನ್ನು ಹಣಕಾಸು ಆಯೋಗ ಬದಲಾವಣೆ ಮಾಡಬೇಕು, ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ರಾಜ್ಯಗಳಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು. ಹಣಕಾಸು ನಿರ್ವಹಣೆಯಲ್ಲಿ ಸೋತಿರುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸುವ ಈಗಿನ ತೆರಿಗೆ ಹಂಚಿಕೆ ವಿಧಾನವನ್ನು ಬದಲಿಸಬೇಕಾಗಿದೆ. ಮೂಲಸೌಕರ್ಯಗಳ ಸುಧಾರಣೆ ಮತ್ತು ದೇಶದ ಅಭಿವೃದ್ದಿಗೆ ಗಣನೀಯ ಕೊಡುಗೆಗಳನ್ನು ನೀಡುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’’ ಎಂದು ಹಣಕಾಸು ಆಯೋಗದ ಮುಂದೆ ಮೋದಿ ವಾದ ಮಾಡಿದ್ದರು ಎಂದು ನೆನಪಿಸಿದ ಸಿದ್ದರಾಮಯ್ಯ, ಇದು ಕೇಂದ್ರ ಸರ್ಕಾರದ ವಿರುದ್ಧದ ನಿಲುವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದೇ ರೀತಿ ಕೇಂದ್ರ ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ವಿರೋಧಿಗಳನ್ನು ಹಣಿಯಲು ಸಿಬಿಐ ಸಂಸ್ಥೆಯನ್ನು ದುರುಪಯೋಗ ಮಾಡುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿಯಾಗಿ ಆರೋಪಿಸುತ್ತಿದ್ದ ನರೇಂದ್ರ ಮೋದಿಯವರು ಈಗ ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದವರನ್ನು ದೇಶದ್ರೊಹಿಗಳೆಂದು ದೂರುತ್ತಿದ್ದಾರೆ ಎಂದು ಪ್ರಧಾನಿಯವರದ್ದು ದ್ವಿಮುಖ ಧೋರಣೆ ಎಂದು ಹೇಳಿದ್ದಾರೆ.

ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕಾನೂನನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದ ನರೇಂದ್ರ ಮೋದಿಯವರು ‘ಇನ್ನು ಮುಂದೆ ನಿತ್ಯ ಬಳಕೆಯ ಉಪ್ಪು, ಸಾಂಬಾರ ಪದಾರ್ಥಗಳನ್ನೂ ವಿದೇಶಿಯರೇ ಮಾರುತ್ತಾರೆ’ ಎಂದು ವ್ಯಂಗ್ಯವಾಡಿದ್ದರು. ಎಫ್ ಡಿ ಐ ನಿಂದಾಗಿ ದೇಶದ ಸಣ್ಣ ಸಣ್ಣ ಅಂಗಡಿ ಮಾಲೀಕರು ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯತ್ತಿದ್ದಾಗ ನರೇಂದ್ರ ಮೋದಿಯವರು ‘ಯುಪಿಎ ಸರ್ಕಾರ ಮತ್ತು ರೂಪಾಯಿ ಉರುಳಿ ಕೆಳಗೆ ಬೀಳುವುದರದಲ್ಲಿ ಪೈಪೋಟಿ ನಡೆಸುವಂತಿದೆ’ ಎಂದು ವ್ಯಂಗ್ಯವಾಡಿದ್ದರು.
ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಗುಜರಾತ್ ಜನ ಬವಣೆ ಪಡುವಂತಾಗಿದೆ ಎಂದು ಗೋಳಿಟ್ಟಿದ್ದ ನರೇಂದ್ರ ಮೋದಿ ಅವರು, ಪ್ರಧಾನಮಂತ್ರಿಯಾದ ನಂತರದ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಪೆಟ್ರೋಲ್ ಬೆಲೆ ಏರಿಸುತ್ತಲೇ ಹೋದರು. ಇದರಿಂದ ಗುಜರಾತಿಗಳು ಮಾತ್ರವಲ್ಲ, ಇಡೀ ದೇಶದ ಜನತೆ ಗೋಳಾಡಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆಧಾರ್ ಗುರುತಿನ ಚೀಟಿಯ ಪ್ರಬಲ ವಿರೋಧಿಯಾಗಿದ್ದ ನರೇಂದ್ರ ಮೋದಿಯವರು ‘ಆಧಾರ್ ಕಾರ್ಡ್ ಗೆ ಭವಿಷ್ಯದ ಮುನ್ನೋಟವೇ ಇಲ್ಲ, ಇದು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದರು. ಅದೇ ಮೋದಿಯವರು ಪ್ರಧಾನಿಯಾದ ನಂತರ ತಮ್ಮ ನಿಲುವು ಬದಲಿಸಿ ಆಧಾರ್ ಗುರುತಿನ ಚೀಟಿಯ ಪ್ರಬಲ ಪ್ರತಿಪಾದಕರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇಂತಹ ಹತ್ತಾರು ಯೂ ಟರ್ನ್‌ಗಳನ್ನು ನಾನು ಪಟ್ಟಿ ಮಾಡಿಕೊಡಬಹುದು. ಆ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದ, ಟೀಕಿಸಿದ್ದ ನರೇಂದ್ರ ಮೋದಿ ಅವರ ಹೇಳಿಕೆಗಳಿಂದ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ಈಗ ನಮ್ಮ ಪ್ರತಿಭಟನೆಯಿಂದ ಹೇಗೆ ಎದುರಾಯಿತು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಿವರಿಸಬೇಕು ಎಂದ ಸಿಎಂ ಸಿದ್ದರಾಮಯ್ಯ, ಈ ಆತ್ಮವಂಚನೆಯ ನಡವಳಿಕೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರೂ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2022ರ ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆಯಲ್ಲಿಯೇ ನಾನು ಮಾತನಾಡುತ್ತಾ “15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದಾಗ ಆಗ ಮುಖ್ಯಮಂತ್ರಿಗಳಾಗಿದ್ದ ಬೊಮ್ಮಾಯಿಯವರು ಅನ್ಯಾಯವಾಗಿರುವುದು ನಿಜ ಎಂದು ಒಪ್ಪಿಕೊಂಡಿರುವುದು ಸದನದ ದಾಖಲೆಯಲ್ಲಿದೆ, ಪತ್ರಿಕೆಗಳಲ್ಲಿಯೂ ಪ್ರಕಟವಾಗಿದೆ. ಇದೇ ಬೊಮ್ಮಾಯಿಯವರು ಹಣಕಾಸು ಆಯೋಗದಿಂದ ಅನ್ಯಾಯವೇ ಆಗಿಲ್ಲ ಎಂದು ಕೂಗಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು ಹೆಚ್ ಡಿ.ಕುಮಾರಸ್ವಾಮಿ ಅವರಿಗೆ ಸತ್ಯ ಮಾತನಾಡಿಯೇ ಗೊತ್ತಿಲ್ಲ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ಮಾಡುವಾಗ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈಗ ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದು ಹೇಳುತ್ತಿರುವ ಕುಮಾರಸ್ವಾಮಿ, ಗುಜರಾತ್ ರಾಜ್ಯದ ಹೆಸರೇ ಎತ್ತುತ್ತಿಲ್ಲ. ಸುಳ್ಳಿನಲ್ಲಿ ಇವರು ಮೋದಿಯವರ ಜೊತೆಯಲ್ಲಿ ಪೈಪೋಟಿಗಿಳಿದಂತಿದೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement