ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ದಕ್ಷಿಣ ಕನ್ನಡ ಲೋಕಸಭೆ : ಕಾಂಗ್ರೆಸ್ ಟಿಕೆಟ್ ಫೈನಲ್ !!!? ಜನಾರ್ಧನ ಪೂಜಾರಿಯವರ ಶಿಷ್ಯ. ಬಿಲ್ಲವ ಮುಖಂಡ.ಖ್ಯಾತ ನ್ಯಾಯವಾದಿ. ಮಂಗಳೂರಿನ : ಪದ್ಮರಾಜ್ ರಾಮಯ್ಯ

Published

on

ಮಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪದ್ಮರಾಜ್ ರಾಮಯ್ಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ವೀಕ್ಷಕರು ಕೊಟ್ಟ ವರದಿಯ ಅನುಸಾರ ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ ಪದ್ಮರಾಜ್ ರಾಮಯ್ಯ ಮತ್ತು ವಿನಯ್ ಕುಮಾರ್ ಸೊರೆಕೆ ಅವರ ಹೆಸರಿತ್ತು. ಈ ಬಗ್ಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸೊರಕೆ ಮತ್ತು ಪದ್ಮರಾಜ್ ಇಬ್ಬರಲ್ಲಿ ಒಬ್ಬರ ಆಯ್ಕೆ ಬಂದಾಗ ಹೈಕಮಾಂಡ್ ನಾಯಕರು ಪದ್ಮರಾಜ್ ಅವರಿಗೆ ಮಣೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಸಕ್ರೀಯರಾಗಿರುವ ಪದ್ಮರಾಜ್, ಪಕ್ಷ ಸಂಘಟನೆಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜೊತೆ ಕೆಲಸ ಮಾಡುತ್ತಾ ಬಹುಸಂಖ್ಯಾತ ಬಿಲ್ಲದ ಸಮುದಾಯದ ಮತಗಳನ್ನು ಕ್ರೋಢಿಕರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಹುಸಂಖ್ಯಾತ ಬಿಲ್ಲವರು ಮತ್ತು ಆರ್ಥಿಕವಾಗಿ ಹಿಂದುಳಿದವರ ಮತಗಳನ್ನು ಸೆಳೆಯುವ ಶಕ್ತಿ ಪದ್ಮರಾಜ್ ಅವರಲ್ಲಿದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಒದಗಿ ಬಂದಿದೆ ಎನ್ನಲಾಗುತ್ತಿದೆ.ಸತತ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ವಿನಯ್ ಕುಮಾರ್ ಸೊರೆಕೆಯವರು ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿಲ್ಲ, ಸಮುದಾಯಗಳ ಮಧ್ಯೆಯೂ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಪದ್ಮರಾಜ್ ಅವರನ್ನು ಬೆಂಬಲಿಸಿದ್ದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ರೈ, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಲಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು ಮತ್ತು ಬ್ಲಾಕ್ ಮಟ್ಟದ ನಾಯಕರು ವೀಕ್ಷಕರ ಮುಂದೆ ಪದ್ಮರಾಜ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಸೋಲಿಸಲು ಪದ್ಮರಾಜ್ ಉತ್ತಮ ಆಯ್ಕೆ ಎಂದು ಮನಗಂಡಿರುವ ಹೈಕಮಾಂಡ್ ನಾಯಕರು, ದಕ್ಷಿಣ ಕನ್ನಡ ಜಿಲ್ಲೆಯ ದೀರ್ಘಾವಧಿಯ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಪದ್ಮರಾಜ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.






2024ರ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ವರ್ಷದ ಹಿಂದೆ ಪದ್ಮರಾಜ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ಟಾಸ್ಕ್ ಅನ್ನು ಜನಾರ್ದನ ಪೂಜಾರಿಯವ ಶಿಷ್ಯನಿಗೆ ಕೆಪಿಸಿಸಿ ಅಧ್ಯಕ್ಷರು ನೀಡಿದ್ದರು. ಕಳೆದ ಎರಡ್ಮೂರು ತಿಂಗಳಿನಿಂದ ಪದ್ಮರಾಜ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಹೈಕಮಾಂಡ್ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಚುನಾವಣೆಗೆ ಸ್ಪರ್ಧಿಸಲು ತಯಾರಾಗುವಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈವಶಮಾಡಿಕೊಳ್ಳಲು ತಯಾರಿ ನಡೆಸುವಂತೆ ಸೂಚನೆ ಕೊಟ್ಟಿದ್ದರು.

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿಯಾಗಿ ಬಿಲ್ಲವ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಪದ್ಮರಾಜ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯ ಮತಬ್ಯಾಂಕ್ ಆಗಿರುವ ಬಿಲ್ಲವರು ಮತ್ತು ಆರ್ಥಿಕವಾಗಿ ಹಿಂದುಳಿದವರ ಮತಗಳು ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ನಾಯಕರು, ಬಿಜೆಪಿಯ ಆಂತರಿಕ ಕಲಹದ ಲಾಭ ಕೂಡ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

1991ರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸಿದ್ದು ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. 1989ರ ಚುನಾವಣೆಯಲ್ಲಿ ಜನಾರ್ದನ ಪೂಜಾರಿಯವರು ಆಯ್ಕೆಯಾದ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿಲ್ಲ. ಜನಾರ್ದನ ಪೂಜಾರಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಕುದುರೆ ಸಿಕ್ಕಿಲ್ಲ. ಹೀಗಾಗಿ ಜನಾರ್ದನ ಪೂಜಾರಿ ಅವರ ಆಪ್ತ ಬಳಗದಲ್ಲಿರುವ ಪೂಜಾರಿಯವರ ಶಿಷ್ಯ ಪದ್ಮರಾಜ್ ರಾಮಯ್ಯಗೆ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ಜನಾರ್ದನ ಪೂಜಾರಿಯವರು ಸೋತ ಬಳಿಕ ಗೆಲ್ಲಲಾಗದ ಕ್ಷೇತ್ರವನ್ನು ಪೂಜಾರಿಯವರ ಶಿಷ್ಯನ ಮೂಲಕ ಗೆದ್ದು ಕೈವಶ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿರುವ ಕಾಂಗ್ರೆಸ್ ಪಕ್ಷ ಪದ್ಮರಾಜ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದು, 33 ವರ್ಷಗಳ ಬಳಿಕ ಬಿಜೆಪಿ ಭದ್ರಕೋಟೆಯನ್ನು ಭೇದಿಸಲು ಅವಕಾಶ ಒದಗಿ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement