Published
10 months agoon
By
Akkare Newsನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ದಮನ್ ಸೇರಿದಂತೆ ವಿವಿಧ ರಾಜ್ಯಗಳ 43 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಕಾಂಗ್ರೆಸ್ನ ಎರಡನೇ ಪಟ್ಟಿಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರ ಹೆಸರು ಸೇರಿದೆ.
ನಿನ್ನೆಯಷ್ಟೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ರಾಹುಲ್ ಕಸ್ವಾನ್ಗೆ ರಾಜಸ್ಥಾನದ ಚುರು ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.
ಇಂದು ಘೋಷಣೆಯಾಗಿರುವ ಪ್ರಮುಖರೆಂದರೆ ಅಸ್ಸಾಂನ ಹಾಲಿ ಸಂಸದ, ಪ್ರದ್ಯುತ್ ಬೋರ್ದೊಲಾಯ್, ನಗೌನ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಗುಜರಾತ್ ಶಾಸಕ ಜೆನಿಬೆನ್ ಠಾಕೂರ್ಗೂ ಬನಸ್ಕಾಂತದಿಂದ ಟಿಕೆಟ್ ನೀಡಲಾಗಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ರೋಹನ್ ಗುಪ್ತಾ ಅಹ್ಮದಾಬಾದ್ನಿಂದ ಕಣಕ್ಕಿಳಿಯಲಿದ್ದಾರೆ.