ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಉಬಾರ್ ಕಂಬಳೋತ್ಸವಕ್ಕೆ ಇಂದು ಚಾಲನೆ; ಬೋಟಿಂಗ್, ಸಸ್ಯ ಮೇಳ, ಆಹಾರ ಮೇಳ, ಸಾಂಸ್ಕೃತಿಕ ವೈಭವ ಈ ಬಾರಿಯ ವಿಶೇಷ

Published

on

ಉಪ್ಪಿನಂಗಡಿ: 38ನೇ ವರ್ಷದ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳವು ಈ ಬಾರಿ ಉಬಾರ್ ಕಂಬಳೋತ್ಸವವಾಗಿ ನಡೆಯಲಿದ್ದು, ಇದಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಕಂಬಳದಲ್ಲಿ ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿದ್ದು, ಇವುಗಳಿಗೆ ಮಾ.29ರಂದು ಪೂರ್ವಾಹ್ನ 11 ಗಂಟೆಗೆ ಚಾಲನೆ ದೊರೆಯಲಿದೆ. ಇನ್ನು ಕಂಬಳ ಕ್ರೀಡೆಗೆ ಮಾ.30ರಂದು ಚಾಲನೆ ದೊರೆಯಲಿದೆ.


ಪುತ್ತೂರು ಶಾಸಕರಾದ, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ಈ ಕಂಬಳವು ಉಪ್ಪಿನಂಗಡಿಯ ಕೂಟೇಲು (ಹಳೆಗೇಟು) ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುತ್ತಲಿದ್ದು, ಈ ಬಾರಿ ಇದಕ್ಕೆ ಉತ್ಸವದ ಮೆರುಗು ನೀಡಲಾಗಿದೆ. ವಿಶೇಷವಾಗಿ ಇಲ್ಲಿ ಸಸ್ಯ ಮೇಳ, ದಕ್ಷಿಣ ಭಾರತ ಶೈಲಿಯ ಆಹಾರ ಮೇಳ, ಕೃಷಿ ಯಂತ್ರೋಪಕರಣ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನೇತ್ರಾವತಿಯ ಹಿನ್ನೀರಿನಲ್ಲಿ ಬೋಟಿಂಗ್ ರೈಡ್ ನಡೆಯಲಿದ್ದು, ಸ್ಪೀಡ್ ಬೋಟ್, ಜೆಟ್ ಸ್ಕಿ, ಪೆಡಲ್ ಬೋಟ್, ಕಯಾಕಿಂಗ್ ವಿಭಾಗಗಳಲ್ಲಿ ಬೋಟಿಂಗ್ ರೈಡ್ ನಡೆಯಲಿದೆ. ಅಲ್ಲದೇ, ನದಿ ಕಿನಾರೆಯಲ್ಲಿ ಮಕ್ಕಳಿಗಾಗಿ ಮನೋರಂಜನಾ ಆಟಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದೇ ಪ್ರತ್ಯೇಕ ವೇದಿಕೆಯನ್ನು ನಿರ್ಮಿಸಲಾಗಿದೆ. ಇವುಗಳು ಮಾ.29ರಂದು ಆರಂಭಗೊಂಡು ಮಾ.31ರ ರಾತ್ರಿಯವರೆಗೆ ನಡೆಯಲಿದೆ.







ವಿಜಯ- ವಿಕ್ರಮ ಜೋಡುಕರೆ ಕಂಬಳವು ಮಾ.30ರಂದು ನಡೆಯಲಿದ್ದು, ಬೆಳಗ್ಗೆ ೮ರಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವಠಾರದಿಂದ ಕಂಬಳ ಕೋಣಗಳ ಭವ್ಯ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 9.31ಕ್ಕೆ ಕಂಬಳ ಕರೆಯ ಬಳಿ ಉದ್ಘಾಟನೆ ನಡೆಯಲಿದ್ದು, 10:31ಕ್ಕೆ ನೇಗಿಲು ಕಿರಿಯ, 11:30ಕ್ಕೆ ಹಗ್ಗ ಕಿರಿಯ, ಮಧ್ಯಾಹ್ನ 12:30ಕ್ಕೆ ನೇಗಿಲು ಹಿರಿಯ, ಮಧ್ಯಾಹ್ನ 2ಕ್ಕೆ ಹಗ್ಗ ಹಿರಿಯ, ಹಗ್ಗ ಮತ್ತು ಕನೆ ಹಲಗೆ ವಿಭಾಗದ ಕೋಣಗಳು ಸಂಜೆ 4ಕ್ಕೆ ಕರೆಗೆ ಇಳಿಯಲಿವೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಗಣ್ಯಾತಿಗಣ್ಯ ವ್ಯಕ್ತಿಗಳು, ತುಳು, ಕನ್ನಡ ಸಿನಿಮಾ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಣಿ ಸಾಗು ಉಮೇಶ್ ಶೆಟ್ಟಿ (ಕಂಬಳ ಕ್ಷೇತ್ರ) ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಂದಾವರ ಉಮೇಶ್ ಶೆಣೈ ಹಿರಿಯ ಕಂಬಳ ಆಯೋಜಕರು, ಗಣೇಶ್ ಶೆಟ್ಟಿ ಗೋಳ್ತಮಜಲು (ದಿ. ಪಂಡಿತ್ ಉಗ್ಗಪ್ಪ ಶೆಟ್ಟಿ ಹಿರಿಯ ಕಂಬಳ ಕೋಣಗಳ ಯಜಮಾನರು), ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ (ಕೃಷಿ ಕ್ಷೇತ್ರ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಪ್ಪು ಯಾನೆ ಜೋನ್ ಸಿರಿಲ್ ಡಿಸೋಜ ಸರಪಾಡಿ (ಅನುಭವಿ ಕಂಬಳ ಕರೆ ನಿರ್ಮಾಪಕರು), ವಿಷ್ಣು ರೈ ನಾಕೂರು (ಪ್ರಾಮಾಣಿಕ ಕೆಲಸಕ್ಕೆ ಅಭಿನಂದನೆ) ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.೩೧ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಕಟನೆ ತಿಳಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement