Published
9 months agoon
By
Akkare Newsಉಡುಪಿ: ಬ್ರಹ್ಮಾವರ ಇಂದಿರಾನಗರದ ಮನೆಯೊಂದರ ಮೇಲೆ ಎ.8ರಂದು ರಾತ್ರಿ ವೇಳೆ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಂತೆ ಖಚಿತ ಮಾಹಿತಿ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾನಗರದಲ್ಲಿರುವ ರಮೇಶ ಪ್ರಭು ಎಂಬವರ ಮನೆ ಮೇಲೆ ಈ ಅಬಕಾರಿ ದಾಳಿ ನಡೆದಿದೆ.
ರಮೇಶ್ ಪ್ರಭು ಅವರ ಪುತ್ರ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದುಬಂದಿದೆ.
ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ದಾಳಿ ನಡೆಸಿದಾಗ ಒಟ್ಟು 33.500 ಲೀಟರ್ ಡಿಫೆನ್ಸ್ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ.
ಈ ಬಗ್ಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕಿ ಮಧುರಾ. ಎನ್. ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.