Published
8 months agoon
By
Akkare Newsಕೋಲ್ಕೊತಾ: ಲೋಕಸಭೆ ಚುನಾವಣೆ ಇರಲಿ, ವಿಧಾನಸಭೆ ಚುನಾವಣೆ ಇರಲಿ, ಅಭ್ಯರ್ಥಿಗಳು ತುಂಬ ವಿಧೇಯರಾಗಿ ಮತಯಾಚನೆ ಮಾಡುತ್ತಾರೆ. ನೀವೇ ನನ್ನ ತಂದೆ-ತಾಯಿ, ಮತದಾರರೇ ನನ್ನ ಅಕ್ಕ-ತಂಗಿ, ಗೆದ್ದು ಬಂದ ಮೇಲೆ ನಾನು ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂಬುದು ಸೇರಿ ಹಲವು ರೀತಿಯಲ್ಲಿ ಜನರ ಮನವೊಲಿಸಲು ಯತ್ನಿಸಿದ್ದಾರೆ.
ಆದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಖಾಗೇನ್ ಮುರ್ಮು ಎಂಬುವರು ಚುನಾವಣೆ ಪ್ರಚಾರದ ಭರಾಟೆಯ ವೇಳೆ ಯುವತಿಯೊಬ್ಬರಿಗೆ ಮುತ್ತು ಕೊಟ್ಟಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು, ಪಶ್ಚಿಮ ಬಂಗಾಳದ ಮಾಲ್ಡಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಖಾಗೇನ್ ಮುರ್ಮು ವರು ಶ್ರೀಹಿಪುರ ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ಯುವತಿಯೊಬ್ಬರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದು ಈಗ ಪಶ್ಚಿಮ ಬಂಗಾಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
“ನರೇಂದ್ರ ಮೋದಿ ಅವರು ಬೇಟಿ ಬಚಾವೋ ಎಂಬ ಅಭಿಯಾನ ಆರಂಭಿಸುತ್ತಾರೆ. ಆದರೆ, ಬಿಜೆಪಿ ನಾಯಕರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ಇಂತಹವರನ್ನು ಚುನಾವಣೆಯಲ್ಲಿ ಸೋಲಿಸಬೇಕು” ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಟಿಎಂಸಿ ನಾಯಕರು ಕೂಡ ಬಿಜೆಪಿ ಸಂಸದನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.