ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಸಮಾಜದ ಜನರ ಭಾವನೆಗಳ ಜತೆಗಿನ ಚೆಲ್ಲಾಟಕ್ಕೆ ಬಿಜೆಪಿಗೆ ತಕ್ಕ ಉತ್ತರ: ಸತ್ಯಜಿತ್‌ ಸುರತ್ಕಲ್

Published

on

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಹೆಸರಿನಲ್ಲಿ ಬಿಲ್ಲವ ಸಮಾಜದ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುವ ಪ್ರಯತ್ನ ಮುಂದುವರಿಸಿದರೆ, ಈ ಬಾರಿ ಅದಕ್ಕೆ ತಕ್ಕ ಉತ್ತರವನ್ನು ಸಮಾಜದ ಜನತೆ ನೀಡಲಿದ್ದಾರೆ ಎಂಬ ಎಚ್ಚರಿಕೆಯನ್ನು ಬಿಜೆಪಿಯವರಿಗೆ ನೀಡುತ್ತಿರುವುದಾಗಿ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ನಂಬಿಕಸ್ತ ಹಾಗೂ ಮುಗ್ಧ ಸಮಾಜ. ಹಿಂದುತ್ವ, ದೇಶದ ಹೆಸರಿನಲ್ಲಿ ಇನ್ನೂ ಸಮಾಜ ತುಮುಲದಲ್ಲಿದ್ದು, ಭಾವನಾತ್ಮಕವಾಗಿ ಅವರ ಜತೆ ಚೆಲ್ಲಾಟವಾಡಬಹುದು ಎಂಬುದು ಸ್ಥಳೀಯ ಬಿಜೆಪಿ ನಾಯಕರು ಭಾವಿಸಿದ್ದರೆ, ಅದು ಸಾಧ್ಯವಿಲ್ಲ. ಸಮಾಜ ಕೂಡ ಬಿಜೆಪಿಯ ಈ ಮೋಸವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಕಿವಿಮಾತನ್ನು ಈ ಸಂದರ್ಭದಲ್ಲಿ ನೀಡುತ್ತಿರುವುದಾಗಿ ಹೇಳಿದರು.

ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸಿ ರೋಡ್ ಶೋ ನಡೆಸುವ ವೇಳೆ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಲಿರುವುದು ಸ್ವಾಗತಾರ್ಹ. ಸ್ಥಳೀಯ ಅಭ್ಯರ್ಥಿಯ ನಾಳಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಕೋಟಿ ಚೆನ್ನಯರ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಈ ತುರ್ತುಗೋಷ್ಟಿಯನ್ನು ನಡೆಸಬೇಕಾಗಿದೆ ಬಂದಿದೆ. 2022ರ ಗಣರಾಜ್ಯೋತ್ಸವ ಪರೇಡ್‌ಗಾಗಿ ಕೇರಳ ಸರಕಾರವು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರೂಪಿಸಿದ್ದ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಅಂದು ಪ್ರಧಾನಿಯವರು ಅದಕ್ಕೆ ಅವಕಾಶ ನೀಡಿದ್ದರೆ ಅದು ನಾರಾಯಣ ಗುರು ಹಾಗೂ ಅವರನ್ನು ಪೂಜಿಸುವ, ಗೌರವಿಸುವ ಬಿಲ್ಲವ ಸಮುದಾಯಕ್ಕೆ ಮಾಡುವ ದೊಡ್ಡ ಗೌರವ ಆಗಿರುತ್ತಿತ್ತು. ಸ್ತಬ್ಧ ಚಿತ್ರ ನಿರಾಕರಣೆಯನ್ನು ವಿರೋಧಿಸಿ ಸಮಾಜ ಪ್ರತಿಭಟಿಸಿದಾಗ ಸ್ತಬ್ಧಚಿತ್ರದ ಅಳತೆ ಸರಿ ಇಲ್ಲ ಎಂಬ ಸಬೂಬು ಹೇಳಿ ಕೊನೆಗೂ ಸ್ಪಷ್ಟನೆ ನೀಡದೆ ತಪ್ಪಿಸಿಕೊಂಡಿತ್ತು. ಕೊನೆಗೆ ನಾಲ್ಕು ವರ್ಷಕ್ಕೊಮ್ಮೆ ಸ್ತಬ್ಧಚಿತ್ರಗಳಿಗೆ ಪ್ರತಿ ರಾಜ್ಯಗಳಿಗೆ ಅವಕಾಶ ಎಂಬ ಸಬೂಬು ನೀಡಲಾಗಿತ್ತು. ಕೊನೆಯ ಕ್ಷಣದವರೆಗೂ ಈ ಬಗ್ಗೆ ಚರ್ಚೆ ನಡೆದು, ಜಿಲ್ಲೆಯ ನಾಯಕರೊಬ್ಬರು ಮುಂದಿನ ವರ್ಷ ರಾಜ್ಯದಿಂದಲೇ ಸ್ತಬ್ಧಚಿತ್ರ ಕಳುಹಿಸುವುದಾಗಿ ಘೋಷಿಸಿದ್ದರೂ ಆಗಿಲ್ಲ.

ಇದನ್ನು ವಿರೋಧಿಸಿ ಉಡುಪಿ, ದ.ಕ., ಚಿಕ್ಕಮಗಳೂರು ಜಿಲ್ಲೆಯ ಬಿಲ್ಲವ ಸಮುದಾಯದ ಮೆರವಣಿಗೆಯನ್ನು ನಡೆಸಿತ್ತು. ಇದಾಗಿ ಹಿಂದಿನ ಬಿಜೆಪಿ ಆಡಳಿತ ಅವಧಿಯಲ್ಲಿ ಪಠ್ಯಪುಸ್ತಕದಿಂದ ನಾರಾಯಣಗುರುಗಳ ಹೆಸರನ್ನು ಕೈಬಿಡಲಾಗಿತ್ತು. ಇದಕ್ಕೂ ಪ್ರತಿಭಟನೆ ನಡೆದು ಸಾಕಷ್ಟು ಸಬೂಬು ನೀಡಿದ್ದ ಬಿಜೆಪಿ ಸರಕಾರ ಸಮಾಜದ ಪ್ರತಿಭಟನೆಯ ಕಾವು ಹೆಚ್ಚಾದಾಗ ಮಣಿದು ಪಠ್ಯವನ್ನು ಅಳವಡಿಸಿತ್ತು. ಆದರೆ ಪಠ್ಯವನ್ನು ಕೈಬಿಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದ ರೋಹಿತ್ ಚಕ್ರತೀರ್ಥ ಎಂಬವರನ್ನು ಮಂಗಳೂರು, ಉಡುಪಿಯಲ್ಲಿ ಸನ್ಮಾನಿಸಲು ಮುಂದಾದಾಗಲೂ ವಿರೋಧ ವ್ಯಕ್ತವಾಗಿ ಕೊನೆಗೂ ಬೆಳ್ತಂಗಡಿಯ ಬಿಜೆಪಿ ಶಾಸಕರು ಹಠಮಾರಿ ಧೋರಣೆ ಮುಂದುವರಿಸಿ ವೇಣೂರಿನ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮಾತ್ರವಲ್ಲದೆ, ಅವರಿಗೆ ಅಪಮಾನ ಮಾಡಿದ ವ್ಯಕ್ತಿಗೆ ಸನ್ಮಾನ ಮಾಡಿಸಿ ಸಮುದಾಯಕ್ಕೆ ಅವಮಾನ ಮಾಡಿರುವುದನ್ನು ಸಮಾಜ ಮರೆತಿಲ್ಲ ಎಂದವರು ನೆನಪಿಸಿಕೊಂಡರು.

ಕೋಟಿ ಚೆನ್ನಯರ ವಿರುದ್ಧ ಈ ಹಿಂದೆ ಅತ್ಯಂತ ಅವಹೇಳನಕಾರಿಯಾಗಿ ಮಾತುಗಳನ್ನಾಡಿದ್ದ ಬಿಜೆಪಿಯ ನಾಯಕರೊಬ್ಬರು ಇಂದಿಗೂ ಬಿಜೆಪಿಯ ಶಾಸಕರ ಜತೆ ತಿರುಗಾಡುತ್ತಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸ ಮಾಡಿಲ್ಲ. ಕೇಂದ್ರದ ಸುಪರ್ದಿಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವ ಬಗ್ಗೆ ಬಿಜೆಪಿ ಅಭ್ಯರ್ಥಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಇದನ್ನು ಮಾಡಲಾಗದವರು ಈಗ ಆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಚಿತ್ತರಂಜನ್ ಗರೋಡಿ ಅವರ ನೇತೃತ್ವದಲ್ಲಿ ಅಂದು ಹೋರಾಟ ನಡೆಸಲು ಮುಂದಾದಾಗ ಅಂದಿನ ಸಂಸದರು ಒಂದು ವರ್ಷದಲ್ಲಿ ಈ ಕಾರ್ಯ ನಡೆಸುವುದಾಗಿ ಭರವಸೆ ನೀಡಿ ಹೋರಾಟ ನಿಲ್ಲಿಸುವಂತೆ ಸೂಚಿಸಿದ್ದರು. ಬಳಿಕ ರ್ಯಾಲಿ ನಡೆದಾಗ ಲಾಠಿ ಜಾರ್ಜ್ ಮಾಡಿಸಿದ್ದು ಅಂದಿನ ಬಿಜೆಪಿ ಸರಕಾರ. ಈ ರೀತಿ ಸಮಾಜದ ಪುಣ್ಯ ಪುರುಷರ ಹೆಸರನ್ನು ದುರುಪಯೋಗ ಪಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಬೇಡ. ಇಂತಹ ನಾಟಕ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದರು.







ದ.ಕ., ಶಿವಮೊಗ್ಗ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಮಾಜದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಕಾರ್ಯ ನಡೆಯುತ್ತಿದೆ. ಸಮಾಜದಲ್ಲಿ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚುನಾವಣೆಯ ಫಲಿತಾಂಶದಿಂದ ನಿರ್ಧಾರ ಆಗಲಿದೆ. ಸಮಾಜಕ್ಕೆ ಯಶಸ್ಸು ಸಿಗುವ ವಿಶ್ವಾಸ ಇದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸತ್ಯಜಿತ್ ಉತ್ತರಿಸಿದರು.ಗೋಷ್ಟಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶವನ್ನು ಸಾರುವ ಕ್ಷೇತ್ರದಲ್ಲಿ ಜವಾಬ್ದಾರಿ ನಿರ್ವಹಿಸುವ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಜವಾಬ್ದಾರಿ ನೀಡಿರುವುದನ್ನು ನೋಡಿ ಸಮಾಜ ಎಲ್ಲಿ ಬಿಜೆಪಿ ಕೈ ಬಿಡುತ್ತದೆಯೋ ಎಂಬ ಅಂಜಿಕೆಯಿಂದ ಬಿಜೆಪಿಗೆ ಮತ್ತೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಾಗಿದೆ. ಅದಕ್ಕಾಗಿ ಪ್ರಧಾನಿಯವರ ಮೂಲಕ ನಾರಾಯಣ ಗುರು ವೃತ್ತದಿಂದ ರೋಡ್ ಶೋಗೆ ಬಿಜೆಪಿ ಮುಂದಾಗಿದೆ ಎಂದ ಸತ್ಯಜಿತ್ ಸುರತ್ಕಲ್, ಇದು ಸಮಾಜಕ್ಕೆ ಮಂಕುಬೂದಿ ಎರಚುವ ಪ್ರಯತ್ನವಾಗಿದ್ದು, ಇದನ್ನು ಖಂಡಿಸುವುದಾಗಿ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement