ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ನಾರಾಯಣ ಗುರುಗಳಿಗೆ ಮಾಲಾರ್ಪಣೆಗೂ ಮುನ್ನ ಮೋದಿ ಉತ್ತರಿಸಬೇಕಿರುವುದು..!- ನವೀನ್ ಸೂರಿಂಜೆ

Published

on

ಎಪ್ರಿಲ್ 14 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಗಳೂರಿನಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ನಾರಾಯಣ ಗುರುಗಳ ಬಗೆಗಿನ ನರೇಂದ್ರ ಮೋದಿಯವರ ನಿಲುವನ್ನು ಸ್ಪಷ್ಟಪಡಿಸಬೇಕು.

2022 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಪ್ರಸ್ತಾಪವನ್ನು ಕಳಿಸಿತ್ತು. ಆದರೆ ಕೇಂದ್ರ ಸರ್ಕಾರವು ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಪೆರೇಡ್ ನಿಂದ ಹೊರ ಹಾಕಿತ್ತು‌.

“ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು” ಎಂಬುವುದು ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ತತ್ವವಾಗಿದೆ. ನಾರಾಯಣ ಗುರುಗಳು ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಈಳವ ಸಮುದಾಯದಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಮಾಜದ ಸುಧಾರಕರಾಗಿ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ನಾರಾಯಣ ಗುರುಗಳು ಮಂಗಳೂರಿಗೂ ಆಗಮಿಸಿ ಮಂಗಳೂರಿನಲ್ಲೂ ಅಸ್ಪೃಶ್ಯತೆಯ ವಿರುದ್ಧ ಕ್ರಾಂತಿ ಮಾಡಿದರು.







ಕೇರಳದ ಈಳವರಂತೆ ಮಂಗಳೂರಿನ ಬಿಲ್ಲವ ಸಮುದಾಯ ಕೂಡಾ ನಾರಾಯಣ ಗುರುಗಳನ್ನು ಸಂತರನ್ನಾಗಿ ಸ್ವೀಕರಿಸಿ ಮನೆ ಮನದಲ್ಲಿ ಪೂಜಿಸುತ್ತಿದೆ. ಬಿಲ್ಲವರ ಸ್ವಾಭಿಮಾನಿ ಚಳವಳಿಯ ಭಾಗವಾಗಿಯೇ ಬಿಲ್ಲವರಿಂದಲೇ ಪೂಜೆಗೊಳಪಡುವ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ನಾರಾಯಣ ಗುರುಗಳು ಸ್ಥಾಪಿಸಿದರು. ಈಗ ಇಡೀ ಕರಾವಳಿಯಲ್ಲಿ ಬಿಲ್ಲವರೇ ಬಹುಸಂಖ್ಯಾತರು. ಇಂತಹ ಸಮುದಾಯದ ಗುರುಗಳ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದ ಪೆರೇಡ್ ನಿಂದ ಹೊರ ಹಾಕಿ ಶಂಕರಾಚಾರ್ಯರ ಸ್ಥಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಧ್ಯತೆ ಮತ್ತು ವಿರೋಧವನ್ನು ಸಾರುತ್ತದೆ.

ನರೇಂದ್ರ ಮೋದಿ ನೇತೃತ್ವದಲ್ಲೇ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿತ್ತು. ಕರ್ನಾಟಕದಲ್ಲಿರುವುದು ಡಬಲ್ ಇಂಜಿನ್ ಸರ್ಕಾರ ಎಂದು ಖುದ್ದು ಪ್ರಧಾನಿ ಮೋದಿಯವರೇ ಹೇಳಿದ್ದರು. ಅಂತಹ ಸರ್ಕಾರದಲ್ಲಿ ಮಕ್ಕಳ ಶಾಲಾ ಪಠ್ಯದಿಂದ ನಾರಾಯಣ ಗುರುಗಳ ಬಗೆಗಿನ ಪಾಠವನ್ನು ಕಿತ್ತು ಹಾಕಲಾಗಿತ್ತು. ಈ ರೀತಿ ನಾರಾಯಣ ಗುರುಗಳನ್ನು ಅವಹೇಳನ ಮಾಡಿದ್ದ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರನ್ನು ಬಿಜೆಪಿಯ ಶಾಸಕರು, ಸಂಸದರುಗಳು ಬೆಂಬಲಿಸಿದ್ದರು.

ನಾರಾಯಣ ಗುರುಗಳು ನಿಜವಾದ ಸಂತ. ಹಿಂದೂ ಧರ್ಮದೊಳಗಿನ ಅಸಮಾನತೆಯನ್ನು ಹೋಗಲಾಡಿಸುವುದರ ಜೊತೆಗೆ ಮನುಷ್ಯತ್ವದ ತತ್ವವನ್ನು ಸಾರಿದವರು. ನಾರಾಯಣ ಗುರುಗಳು ಬಿಲ್ಲವರು ವಿದ್ಯೆ-ಉದ್ಯೋಗ- ಸಂಪರ್ಕದಿಂದ ಬಲಯುತರಾಗಬೇಕು ಎಂದು ಬಯಸಿದ್ದರು‌. ಆದರೆ ಕರಾವಳಿಯ ಬಿಲ್ಲವ ಯುವಕರನ್ನು ಮೋದಿಯ ತಂಡ ಯಾವ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ? ನಾರಾಯಣ ಗುರುಗಳು ಈಗ ಬದುಕಿದ್ದರೆ ತನ್ನವರನ್ನು ಸಾಯಲು ಮತ್ತು ಸಾಯಿಸಲು ಬಳಸುವ ಮೋದಿಯ ರಾಜಕೀಯದ ಬಗ್ಗೆ ಯಾವ ನಿಲುವು ತಾಳುತ್ತಿದ್ದರು. ನಾರಾಯಣ ಗುರುಗಳು ಜಾತ್ಯಾತೀತವಾದ ಸ್ಪಷ್ಟ ನಿಲುವನ್ನು ಹೊಂದಿದ್ದರು. ಆ ಕಾರಣಕ್ಕಾಗಿಯೇ ಮಹತ್ಮಾ ಗಾಂಧಿ, ಸ್ವಾಮೀ ವಿವೇಕಾನಂದರ ಒಡನಾಟ ಹೊಂದಿದ್ದರು. ಇಂತದ್ದೊಂದು ಐತಿಹಾಸಿಕ ಕಾರಣಕ್ಕಾಗಿಯೇ ಬಿಲ್ಲವರ ಕಂಕನಾಡಿ ಗರಡಿಯಲ್ಲಿ ಇಂದಿಗೂ ಗಾಂಧಿಗೆ ತ್ರಿಕಾಲ ಪೂಜೆ ನಡೆಯುತ್ತಿದೆ. ಅಂತಹ ಗಾಂಧಿಯನ್ನು ಗುಂಡಿಟ್ಟುಕೊಂದ ಗೋಡ್ಸೆಯ ಜನ್ಮದಿನವನ್ನು ಹಿಂದೂ ಮಹಾಸಭಾ ಎಂಬ ಸಂಘಟನೆ ಮಂಗಳೂರಿನಲ್ಲಿ ಆಚರಿಸುತ್ತದೆ. ಇದು ನಾರಾಯಣ ಗುರುಗಳ ಮೇಲಿನ ದಾಳಿಯೇ ಹೊರತು ಗಾಂಧಿ ಮೇಲಿನ ದಾಳಿಯಲ್ಲ.

ನಾರಾಯಣ ಗುರುಗಳು 1888 ರಲ್ಲಿ ಕೇರಳದ ಅರವಿಪುರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದಾಗ ಅಲ್ಲಿ ಫಲಕವೊಂದರಲ್ಲಿ ಘೋಷಣೆಯನ್ನು ಮಲಯಾಳಂ ಭಾಷೆಯಲ್ಲಿ ಬರೆಸುತ್ತಾರೆ.‌ ಅದರ ಕನ್ನಡ ಭಾವಾರ್ಥ ಹೀಗಿದೆ :-
ಜಾತಿ ಭೇದ ಮತ ದ್ವೇಷ
ಒಂದೂ ಇಲ್ಲದ ಸರ್ವರೂ
ಸೋದರತ್ವದಿ ಬಾಳುವ
ಮಾದರಿ ಸ್ಥಾನವು ಇದು

ನಾರಾಯಣ ಗುರುಗಳ ಈ ತತ್ವವನ್ನು ಪಾಲಿಸುವವರು ಮಾತ್ರ ನಾರಾಯಣ ಗುರುಗಳ ಅನುಯಾಯಿಗಳಾಗುತ್ತಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡುವ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಈ ತತ್ವವನ್ನು ಪಾಲಿಸುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಾರೆಯೇ ? ಹಾಗಾಗಿ ನಾರಾಯಣ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಲಾರ್ಪಣೆ ಮಾಡುವುದಕ್ಕೂ ಮೊದಲು ಕರಾವಳಿಯಲ್ಲಿ ಬಹುಸಂಖ್ಯಾತರಾಗಿರುವ ನಾರಾಯಣ ಗುರು ಅನುಯಾಯಿಗಳ ಭಾವನೆಗಳಿಗೆ ಉತ್ತರ ಕೊಡಬೇಕು.

Continue Reading
Click to comment

Leave a Reply

Your email address will not be published. Required fields are marked *

Advertisement