Published
8 months agoon
By
Akkare Newsಪುತ್ತೂರು: ದೇಶದಲ್ಲಿ ಜಾತಿ ಧರ್ಮಗಳ ನಡುವೆ ಒಡಕು ಮೂಡಿಸುವ ಬಿಜೆಪಿಯ ಹಿಂದುತ್ವ ದೇಶಕ್ಕೆ ಮಾರಕವಾಗಲಿದೆ. ನಮ್ಮ ನಡುವಿನ ಒಡಕುಗಳ ಕಾರಣದಿಂದ ಇತರ ದೇಶಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡುವ ಸಂದರ್ಭಗಳು ಉಂಟಾಗುವ ಅಪಾಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ಹಿಂದುತ್ವ. ನಾನು ಓರ್ವ ಹಿಂದೂ ಎಂದು ಎದೆತಟ್ಟಿ ಹೇಳಬಲ್ಲೆ. ನಾನು ೯೦ ಮಂದಿ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇನೆ. ೨೨ ಸಾವಿಕ ಕುಟುಂಬಗಳಿಗೆ ವಿವಿಧ ಬಗೆಯಲ್ಲಿ ಆರ್ಥಿಕ ಸಹಕಾರ ನೀಡಿದ್ದೇನೆ. ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ನೇತೃತ್ವ ವಹಿಸಿದ್ದೇನೆ. ನಾನು ಮತ್ತು ಪದ್ಮರಾಜ್ ಪೂಜಾರಿಯನ್ನು
ಒಂದು ಕಡೆ ಹಾಗೂ ಜಿಲ್ಲೆಯ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು ಮತ್ತು ಮುಖಂಡರನ್ನು ಒಂದು ಕಡೆ ನಿಂತು ಚರ್ಚೆಗೆ ಬರಲಿ. ಅವರು ಮಾಡಿರುವ ಹಿಂದುತ್ವದ ಕೆಲಸ ಮತ್ತು ನಾವು ಮಾಡಿರುವ ಹಿಂದುತ್ವದ ಕೆಲಸಗಳ ಬಗ್ಗೆ ಚರ್ಚೆಯಾಗಲಿ. ಬಿಜೆಪಿಗರದ್ದು ನಕಲಿ ಹಿಂದುತ್ವ. ಇನ್ನೊಂದು ಧರ್ಮವನ್ನು ಗೌರವಿಸುವುದೇ ನಿಜವಾದ ಹಿಂದುತ್ವ. ರಾಜಕೀಯ ಲಾಭಕ್ಕಾಗಿ ಅವರಿಂದ ಹಿಂದುತ್ವದ ಬಳಕೆಯಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಡಳಿತದ ಸಂದರ್ಭದಲ್ಲಿ ೪೦% ಕಮೀಷನ್ ಸೇರಿದಂತೆ ಬಡವರ ರಕ್ತ ಹೀರಿದ್ದ ಬಿಜೆಪಿಗೆ ದೇವರು ಉತ್ತಮ ಪ್ರತಿಫಲವನ್ನು ನೀಡಿದ್ದಾರೆ. ಕಾಂಗ್ರೆಸ್ಗೆ ದೇವರು ಅನುಗ್ರಹಿಸಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಹೊರಗೆ ಹೋದರೆ ಮತ್ತೆ ಮನೆಗೆ ಬರುವ ಸ್ಥಿತಿ ಇಲ್ಲದಂತಾಗುತ್ತದೆ. ಯುವಕರು ಜೈಲು ಪಾಲಾಗುತ್ತಾರೆ ಎಂದೆಲ್ಲಾ ಬಿಜೆಪಿ ಪ್ರಚಾರ ನಡೆಸಿತ್ತು. ಆದರೆ ಇದೀಗ ಸರ್ಕಾರ ಗ್ಯಾರಂಟಿಯ ಕಾರಣದಿಂದಾಗಿ ಹೆಣ್ಣು ಮಕ್ಕಳು ಆರ್ಥಿಕ ಸಬಲೀಕರಣದೊಂದಿಗೆ ಸ್ವಾವಲಂಬಿಗಳಾಗಿದ್ದಾರೆ. ಯುವಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಗ್ಯಾರಂಟಿ ಮೂಲಕ ನೀಡಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ ಪಕ್ಷದ ಕಾರ್ಯಕರ್ತರ ಮೇಲೆ ಭರವಸೆ ಇಟ್ಟಿರುವ ಶಾಸಕರು ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ೨೫ಸಾವಿರ ಲೀಡ್ ಒದಗಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ನಿಜಗೊಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಉಪಯೋಗ ನೀಡದ ಬಿಜೆಪಿ ಕೇವಲ ಕೋಮುವಾದವನ್ನೇ ಬಂಡವಾಳವನ್ನಾಗಿ ಅಧಿಕಾರ ಪಡೆಯಲು ಮತ್ತೆ ಯತ್ನಿಸುತ್ತಿದೆ. ಇದನ್ನು ತಡೆದ ಸಾಮರಸ್ಯದ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜನರು ಪಟ್ಟಿರುವ ಸಂಕಷ್ಟವನ್ನು ನಾವೆಲ್ಲರೂ ಅರಿತಿದ್ದೇವೆ. ಕುತಂತ್ರದ ಮೂಲಕವೇ ಬಿಜೆಪಿ ಗೆಲುವು ಪಡೆಯುತ್ತಿದೆ. ಈ ಬಾರಿ ಅವರ ಕುತಂತ್ರವನ್ನು ಮೆಟ್ಟಿ ನಿಂತು ಕಾಂಗ್ರೆಸ್ ಗೆಲುವು ಪಡೆಯಲಿದೆ. ಪುತ್ತೂರಿನಲ್ಲಿ ಬಿಜೆಪಿಯಿಂದ ಒಂದು ಲಕ್ಷ ಅಧಿಕ ಮತಗಳನ್ನು ಪಡೆಯುವ ಗುರಿಯನ್ನು ನಿಗದಿಪಡಿಸಿಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ ಮಾತನಾಡಿ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಭೃಷ್ಟರನ್ನು ತೊಡೆದು ಹಾಕಿದ್ದೇವೆ. ಇದೀಗ ಜಿಲ್ಲೆಯಿಂದಲೇ ಭ್ರಷ್ಟರನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪದ್ಮರಾಜ್ ಪೂಜಾರಿ ಅವರನ್ನು ಬೆಂಬಲಿಸಬೇಕು. ರಾಜ್ಯದಲ್ಲಿ ನುಡಿದಂತೆ ನಡೆದ ಸರ್ಕಾರವಿದೆ, ಕೇಂದ್ರದಲ್ಲಿಯೂ ನುಡಿದಂತೆ ನಡೆಯುವ ಸರ್ಕಾರ ಬರಬೇಕಾಗಿದೆ ಎಂದರು.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಚಂದ್ರಹಾಸ ಶೆಟ್ಟಿ, ಶಾರದಾ ಅರಸ್, ಮುರಳೀಧರ ರೈ ಮಠಂತಬೆಟ್ಟು, ಎಚ್. ಮಹಮ್ಮದ್ ಆಲಿ, ಪ್ರಸಾದ್ ಕೌಶಲ್ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಶಕೂರ್ ಹಾಜಿ, ನಿರ್ಮಲ್ ಕುಮಾರ್ ಜೈನ್, ಶೀನಪ್ಪ ಗೌಡ, ಬೆಟ್ಟ ಈಶ್ವರ ಭಟ್, ನೂರುದ್ದೀನ್ ಸಾಲ್ಮರ, ಶಿವರಾಮ ಆಳ್ವ ಮತ್ತಿತರರು ಉಪಸ್ಥಿತರಿದ್ದರು.