Published
11 months agoon
By
Akkare Newsಮೇ 01: ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಬಾರಿಯ ಬೇಸಿಗೆಯ ಬಿಸಿಲಿನ ಝಳಕ್ಕೆ ಸಿಲಿಕಾನ್ ಸಿಟಿ ಜನರು ಹೈರಾಣಿ ಹೋಗಿದ್ದು, ವರುಣನ ಕೃಪೆಗಾಗಿ ಕಾಯುತ್ತಿದ್ದಾರೆ. ಆದರೆ ಬೆಂಗಳೂರಿನ ವಾತಾವರಣ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ಧಗೆ ತಡೆಯಲಾರದೇ ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ಹಣ್ಣಿನ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿದ್ದು, ಹಣ್ಣಿನ ಜ್ಯೂಸ್ ದರವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗಿದ್ದು, ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈಗ ಜ್ಯೂಸ್ಗಳ ಬೆಲೆಯಲ್ಲಿ ಎರಡಂಕಿಯ ಸಂಖ್ಯೆಯಲ್ಲಿ ದರ ಏರಿಕೆಯಾಗಿದೆ. ಪ್ರತಿ ಜ್ಯೂಸ್ ಬೆಲೆಯೂ 10 ರಿಂದ 20 ರೂಪಾಯಿ ಏರಿಕೆಯಾಗಿದೆ. ಇನ್ನು ಪ್ರತಿದಿನ ಒಂದೊಂದು ಅಂಗಡಿಗಳಲ್ಲಿಯೂ 500 ರಿಂದ 600 ಗ್ಲಾಸ್ ಜ್ಯೂಸ್‌ಗಳು ಮಾರಾಟ ಆಗುತ್ತಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಇನ್ನು ಬಿಸಿಲಿನಿಂದ ಹಣ್ಣುಗಳ ಬೆಳೆಯಲ್ಲೂ ಕುಂಠಿತವಾಗಿದ್ದು, ಮಾರುಕಟ್ಟೆಗಳಲ್ಲಿ ಹಣ್ಣಿನ ಬೆಲೆ ಏರಿಕೆಯಾಗಿದೆ. ಆದರೆ ಜ್ಯೂಸ್‌ಗೆ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನ ಮಧ್ಯಾಹ್ನದ ವೇಳೆ ಜ್ಯೂಸ್ ಸೆಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಜ್ಯೂಸ್ ಕುಡಿಯುತ್ತಾರೆ. ಹೀಗಾಗಿ ಅಂಗಡಿ ಮಾಲೀಕರು ಜ್ಯೂಸ್‌ಗಳ ದರ ಹೆಚ್ಚಿಸಿದ್ದಾರೆ.
ಇದು ಹಣ್ಣುಗಳಿಂದ ಮಾಡುವ ಜ್ಯೂಸ್ ಕಥೆಯಾದರೆ, ನೈಸರ್ಗಿಕವಾದ ಜ್ಯೂಸ್ ಎಳನೀರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನುವಂತಾಗಿದೆ. ಸರ್ವ ಕಾಲಕ್ಕೂ ಎಳನೀರಿನ ಬೆಲೆ ಒಂದು ಮಟ್ಟಿಗೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ವರ್ಷದ ಬೇಸಿಗೆಗೆ ಮಾತ್ರ ಗ್ರಾಹಕರಿಗೆ ಶಾಕ್ ಆಗುವ ರೀತಿ ಎಳನೀರಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ.
ಕಳೆದ ಎರಡು ತಿಂಗಳ ಹಿಂದೆ 35ರಿಂದ 40 ರೂಪಾಯಿ ಇದ್ದ ಏಳನೀರು ಈಗ 50 ರಿಂದ 70 ರೂಪಾಯಿ ವರೆಗೂ ಮಾರಾಟವಾಗುತ್ತಿದೆ. ಕೆಲವರು ಜ್ಯೂಸ್ ಅಂಗಡಿಗಳಲ್ಲಿ ಸಕ್ಕರೆ ಬಳಸುತ್ತಾರೆ ಎನ್ನುವ ಕಾರಣಕ್ಕೆ ಜ್ಯೂಸ್ ಕುಡಿಯದೇ ಏಳನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ಆರೋಗ್ಯಕ್ಕೂ ಒಳ್ಳೆಯದಾಗಿರುವ ಕಾರಣ ಎಳನೀರಿನ ಬೆಲೆ ಏರಿಕೆಯಾದರೂ ಗ್ರಾಹಕರು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ.