Published
8 months agoon
By
Akkare Newsಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಜರುಗಿದ 52ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಒಟ್ಟು 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಶ್ರೀ ಧರ್ಮಸ್ಥಳ ದೇವಸ್ಥಾನದ ಮುಂಭಾಗದಿಂದ ಅಮೃತವರ್ಷಿಣಿ ಸಭಾಭವನದವರೆಗೆ ಸಾಮೂಹಿಕ ವಿವಾಹದ ಮೆರವಣಿಗೆ ನಡೆಯಿತು. ಬ್ಯಾಂಡ್, ವಾಲಗ, ನಂದಿ, ಆನೆಗಳು, ಹಕ್ಕಿ ನಿಶಾನೆ, ತಟ್ಟಿರಾಯ ಮೊದಲಾದ ವಿಶೇಷ ಆಕರ್ಷಣೆಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ವಧೂ – ವರರು ಭಾಗವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಚಿತ್ರನಟ ದೊಡ್ಡಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಈ ಹಿಂದೆ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಮಕ್ಕಳು, ಮೊಮ್ಮಕ್ಕಳು ಈ ಬಾರಿ ವಧೂ – ವರರಾಗಿ ಸಾಮೂಹಿಕ ವಿವಾಹವಾದರು. ದ.ಕ.ಜಿಲ್ಲೆಯಲ್ಲದೆ, ರಾಜ್ಯದ ತಮಿಳುನಾಡು ರಾಜ್ಯದ ವಧು-ವರರೂ ಈ ಸಾಮೂಹಿಕ ವಿವಾಹದಲ್ಲಿ ದಂಪತಿಯಾಗಿ ಹೊಸಜೀವನಕ್ಕೆ ಪಾದಾರ್ಪಣೆ ಮಾಡಿದರು. ಕೂಲಿ, ಬೇಸಾಯ, ವ್ಯಾಪಾರ, ಚಾಲಕ, ಖಾಸಗಿ ಉದ್ಯೋಗ, ಸರಕಾರಿ ಉದ್ಯೋಗ, ಮರದ ಕೆಲಸ, ಮೀನುಗಾರಿಕೆ ಮೊದಲಾದ ವೃತ್ತಿಯಲ್ಲಿ ತೊಡಗಿಕೊಂಡಿರುವ 123 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಲಾಯಿತು.