Published
7 months agoon
By
Akkare Newsಮಂಗಳೂರು :ಪೊಲೀಸ್ ವಾಹನವೊಂದರ ವಿಮೆ ಮುಕ್ತಾಯವಾಗಿದೆ ಎಂಬ ವಿಡಿಯೋ ಇಂದು ಬೆಳಗ್ಗಿನಿಂದ ಮಂಗಳೂರು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಪೊಲೀಸ್ ಕಮಿಷನರ್ ವಿಡಿಯೋ ಮಾಡಿದವನಿಗೆ ದಂಡದ ಬಿಸಿ ಮುಟ್ಟಿಸಿ, ವಿಮೆ ಮುಕ್ತಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೇ 16ರಂದು ಸಂಜೆ ನಗರದ ಕುಂಟಿಕಾನ ಬಳಿ ಕೆಎ-19-ಜಿ-1023 ನೋಂದಣಿಯ ಹೆದ್ದಾರಿ ಗಸ್ತು ವಾಹನ ಕರ್ತವ್ಯದಲ್ಲಿತ್ತು. ಈ ವೇಳೆ ವ್ಯಕ್ತಿಯೋರ್ವನಿಗೆ ಟ್ರಾಫಿಕ್ ಪೊಲೀಸ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರಿಸಿಲ್ಲ ಎಂದು ದಂಡ ವಿಧಿಸಿದ್ದರು. ಇದರಿಂದ ಕುಪಿತನಾದ ಆತ ಹೆದ್ದಾರಿ ಗಸ್ತು ವಾಹನದ ವಿಡಿಯೋ ಚಿತ್ರೀಕರಣ ಮಾಡಿ ಅದರ ವಿಮಾ ಅವಧಿಯು ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾನೆ. ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇದು ತಪ್ಪು ಮಾಹಿತಿ, ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳು ಕಡ್ಡಾಯವಾಗಿ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್ಮೆಂಟ್ (ಕೆ.ಜಿ.ಐ.ಡಿ) ವಿಮೆ ಹೊಂದಿರುತ್ತವೆ. ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಣವಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ತೋರಿಸಲಾಗಿರುವ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿ 2025ರ ಅಕ್ಟೋಬರ್ 13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಚಾಲ್ತಿಯಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ವಿಡಿಯೋ ಮಾಡಿ ವೈರಲ್ ಮಾಡಿರುವ ವ್ಯಕ್ತಿಯ ಬೈಕ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರ್ಪಡಿಸದೇ ಇರುವುದರಿಂದ ಆತನ ಮೇಲೆ ರೂ. 500 ದಂಡ ವಿಧಿಸಲಾಗಿದೆ.