Published
11 months agoon
By
Akkare Newsಬಂಟ್ವಾಳ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವೊಂದು 30 ಅಡಿ ಆಳದ ಬಾವಿಗೆ ಬಿದ್ದಿದ್ದು, ತಕ್ಷಣ ತನ್ನ ಬಾವಿಗಿಳಿದು ಯುವಕರೊಬ್ಬರು ರಕ್ಷಿಸಿರುವ ಘಟನೆ ಸರಪಾಡಿಯ ಹಂಚಿಕಟ್ಟೆಯಲ್ಲಿ ನಡೆದಿದೆ.
ಹಂಚಿಕಟ್ಟೆ ನಿವಾಸಿ ನೋಣಯ್ಯ ನಾಯ್ಕ ಅವರ ಪುತ್ರ ಅಭಿಷೇಕ್ ಬಾವಿಗೆ ಬಿದ್ದ ಬಾಲಕ ಎಂದು ತಿಳಿದು ಬಂದಿದೆ.
ಮಠದಬೆಟ್ಟು ನಿವಾಸಿ ಉಮೇಶ್ ನಾಯ್ಕ ರಕ್ಷಿಸಿದ ಯುವಕ ತಿಳಿದು ಬಂದಿದೆ.
ಅಂಗಳದಲ್ಲಿ ಆಡುತ್ತಿದ್ದ ಮಗು ಬಾವಿಯ ದಂಡೆಯ ಮೇಲೇರಿ ಕಸ ಬೀಳುತ್ತದೆ ಎಂದು ಅಡ್ಡಲಾಗಿ ಹಾಕಿದ್ದ ಬಲೆಯ ಮೇಲೆ ಹೋಗಿದ್ದು, ಆಗ ಬಲೆ ಹರಿದು ಮಗು ಬಾವಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಮನೆಯೊಳಗೆ ಮಗುವಿನ ತಾಯಿ ಹಾಗೂ ಆಕೆಯ ಸಹೋದರಿ ಮಾತ್ರ ಇದ್ದು, ನೀರಿಗೆ ಏನೋ ಬಿದ್ದ ಶಬ್ದ ಕೇಳಿಸಿತೆಂದು ಹೊರಗೆ ಬಂದು ನೋಡಿದಾಗ ಮಗು ಬಾವಿಗೆ ಬಿದ್ದಿರುವುದು ಗೋಚರಿಸಿತು.
ಅವರ ಮನೆ ರಸ್ತೆ ಬದಿಯಲ್ಲೇ ಇದ್ದು, ತಾಯಿಯ ಆಕ್ರಂದನ ಕೇಳಿ ಬೈಕಿನಲ್ಲಿ ಹೋಗುತ್ತಿದ್ದ ಯುವಕ ಉಮೇಶ್ ನಾಯ್ಕ ನೆರವಿಗೆ ಧಾವಿಸಿ ಬಂದರು.
ತುಂಡಾಗುವ ಸ್ಥಿತಿಯಲ್ಲಿ ಇದ್ದ ಹಳೆಯ ಹಗ್ಗವನ್ನು ಬಳಸಿ ಬಾವಿಗೆ ಇಳಿದು ಮಗುವನ್ನು ಎತ್ತಿ ಹಿಡಿದು ರಕ್ಷಿಸಿದರು.
ಅಷ್ಟರಲ್ಲಿ ಹೊರಗೆ ಹೋಗಿದ್ದ ಮಗುವಿನ ತಂದೆ ನೋಣಯ್ಯ ನಾಯ್ಕ ಹಾಗೂ ಮತ್ತಿಬ್ಬರು ಬಂದಿದ್ದು, ಅವರು ಬೇರೆ ಹಗ್ಗದ ಸಹಾಯದಿಂದ ಮಗುವನ್ನು ಮೇಲಕ್ಕೆತ್ತಿದರು. ಬಳಿಕ ಉಮೇಶ್ ಮೇಲೆ ಬಂದರು ಎಂದು ತಿಳಿದು ಬಂದಿದೆ.
ಮಗು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಯುವಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.