Published
7 months agoon
By
Akkare News
ಬೆಂಗಳೂರು, ಮೇ 23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಮತ್ತೆ ಎಫ್.ಐ.ಆರ್ ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 504ರಡಿ ಹರೀಶ್ ಪೂಂಜಾ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಅಂತಾ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹರೀಶ್ ಪೂಂಜಾ ನಿವಾಸದ ಬಳಿ ಹೈಡ್ರಾಮಾಮೇ ನಡೆದಿತ್ತು. ಬಂಧಿಸಲು ಆಗಮಿಸಿದ್ದ ಪೊಲೀಸರು ಕೊನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು. ಇದೀಗ ಬೆಂಗಳೂರಿನತ್ತ ಹೊರಟಿರುವ ಹರೀಶ್ ಪೂಂಜಾ ಕೇಸ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಎರಡು ಪ್ರಕರಣಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ನಿನ್ನೆ ಠಾಣಾ ಜಾಮೀನಿನ ಮೇಲೆ ಪೂಂಜಾ ಬಿಡುಗಡೆ ಮಾಡಲಾಗಿತ್ತು. ಮತ್ತೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಕೊಟ್ಟಿದ್ದರು. ಹೀಗಾಗಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ.
ಪೊಲೀಸರಿಗೆ ಧಮ್ಕಿ ಹಾಕಿದ ಆರೋಪದಡಿ FIR ದಾಖಲಿಸಿದ್ದ ಪೊಲೀಸರು ಹರೀಶ್ ಪೂಂಜಾ ಬಂಧಿಸಲು ನಿವಾಸಕ್ಕೆ ಬಂದಿದ್ದರು. ಆದರೆ ಇಡೀ ದಿನ ಹೈಡ್ರಾಮಾವೇ ನಡೆಯಿತು. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರ ಪ್ರತಿಭಟನೆ ಹೈಡ್ರಾಮಾ ನಡೆದಿತ್ತು. ಕೊನೆಗೆ ಸಂಜೆ ನಂತರ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.
ಪೂಂಜಾಗೆ ಶಾಸಕರಾದ ಸುನೀಲ್ ಕುಮಾರ್, ವೇದವ್ಯಾಸ ಕಾಮತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲಾ ಸೇರಿದಂತೆ ಬಿಜೆಪಿ ನಾಯಕರು ವಕೀಲರು ಸಾಥ್ ನೀಡಿದ್ದರು. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.ವಿಚಾರಣೆಗೆ ಹಾಜರಾಗಿದ್ದ ಹರೀಶ್ ಪೂಂಜಾಗೆ ಇವತ್ತು ಮಧ್ಯಾಹ್ನ 12ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಠಾಣೆ ಇನ್ಸ್‌ಪೆಕ್ಟರ್ ನೋಟಿಸ್ ನೀಡಿದ್ದರು. ಆದರೆ ಸಾಧ್ಯವಿಲ್ಲ ಅಂತಾ ಮೌಖಿಕವಾಗಿ ತಿಳಿಸಿ ಬಂದಿದ್ದರು. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಎಸ್‌ಪಿ ಬಗ್ಗೆ ಮಾತನಾಡಿದ್ದಕ್ಕೆ ಸಮರ್ಥಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಈ ವಿಚಾರವನ್ನು ಇಲ್ಲಿಗೆ ಬಿಡಲ್ಲ ಎಂದು ಹೇಳಿದ್ದರು.
ಪ್ರಕರಣದ ಹಿನ್ನೆಲೆ :
ಈ ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಹರೀಶ್ ಪೂಂಜಾ ಬೆಂಬಲಿಗರು ಮೆಲಂತಬೆಟ್ಟುವಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರು ಅಂತಾ ಆರೋಪಿಸಿ ಬೆಳ್ತಂಗಡಿ ತಹಶಿಲ್ದಾರ್ ದಾಳಿ ಮಾಡಿದ್ದರು. ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಮೇ 18 ರಂದು ದೂರು ನೀಡಿದ್ದರು.
ಶಾಸಕ ಹರೀಶ್ ಪೂಂಜಾ ಆಪ್ತರಾದ ಪ್ರಮೋದ್ ಉಜಿರೆ ಮತ್ತು ಶಶಿರಾಜ್ ಶೆಟ್ಟಿ ಮೇಲೆ ದೂರು ದಾಖಲಾಗಿತ್ತು. ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ, ರೌಡಿಶೀಟರ್ ಆಗಿದ್ದ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ತಿಳಿದ ಪೂಂಜಾ ಪೊಲೀಸರ ವಿರುದ್ಧ ಕೆಂಡಮಂಡಲರಾಗಿದ್ದರು. ಮದ್ಯರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ್ದರು. ಈ ವೇಳೆ ಪಿಎಸ್‌ಐಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿತ್ತು.