Published
11 months agoon
By
Akkare Newsಮೂರನೇ ಬಾರಿಗೆ ಪ್ರಶಸ್ತಿಯನ್ನು ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್
ಶಾರೂಖ್ ಖಾನ್ ಮಾಲಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 17ನೇ ಆವೃತಿಯ ಐ.ಪಿ.ಎಲ್ ಕ್ರಿಕೆಟ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅತ್ಯಮೋಘ ಬೌಲಿಂಗ್ ದಾಳಿ ನಡೆಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿ ಮೂರನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳ ಮಾರಕ ದಾಳಿಗೆ ನಲುಗಿ 18.3 ಓವರ್ ಗಳಲ್ಲಿ 113 ರನ್ ಗೆ ಸರ್ವಪತನಗೊಂಡಿತು.
ಗುರಿ ಬೆನ್ನತ್ತಿದ್ದ ಕೆಕೆಆರ್ ಸುನಿಲ್ ನಾರಾಯಣ್ ಅವರ ವಿಕೆಟ್ ಆರಂಭದಲ್ಲೇ ಕಳೆದುಕೊಂಡರೂ ಸ್ಪೋಟಕ ಆಟವಾಡಿದ ವೆಂಕಟೇಶ್ ಅಯ್ಯರ್ ಸ್ಪೋಟಕ ಅರ್ಧ ಶತಕ 52ರನ್( 26ಎಸೆತ ) ಸಿಡಿಸಿದರು. 10.3ಓವರ್ ಗಳಲ್ಲಿ 114 ರನ್ ಗಳಿಸಿ ಜಯಭೇರಿ ಬಾರಿಸಿತು. ಅತ್ಯುತ್ತಮವಾಗಿ ಆಡಿದ ಗುರ್ಬಾಜ್ 39(31ಎಸೆತ) ರನ್ ಗಳಿಸಿ ಔಟಾದರು.
ಹೀನಾಯ ನಿರ್ವಹಣೆ ತೋರಿದ ಹೈದರಾಬಾದ್
ಮೊದಲ ಓವರ್ ನಲ್ಲೆ 2 ರನ್ ಗಳಿಸಿದ್ದ ಅಭಿಷೇಕ್ ಶರ್ಮ ಅವರ ವಿಕೆಟ್ ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಿತ್ತರು. ಇನ್ನೊಂದು ಓವರ್ ನಲ್ಲಿ ಹೆಡ್ ಶೂನ್ಯಕ್ಕೆ ನಿರ್ಗಮಿಸಿದರು. ತಂಡ ಭಾರೀ ಆಘಾತಕ್ಕೆ ಸಿಲುಕಿತು.
ಆರಂಭಿಕ ಆಘಾತದ ಬಳಿಕ ಕೆಕೆಆರ್ ಬೌಲರ್ ಗಳು ಹಿಡಿತ ಸಾಧಿಸಿದರು. ಹೈದರಾಬಾದ್ ಬ್ಯಾಟ್ಸ್ ಮ್ಯಾನ್ ಗಳು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು. ರಾಹುಲ್ ತ್ರಿಪಾಠಿ 9, ನಿತೀಶ್ ರೆಡ್ಡಿ 13, ಮಾರ್ಕ್ರಾಮ್ 20 , ಶಹಬಾಜ್ ಅಹ್ಮದ್ 8,ಅಬ್ದುಲ್ ಸಮದ್ 4, ಹೆನ್ರಿಚ್ ಕ್ಲಾಸೆನ್ 16, ಜಯದೇವ್ ಉನದ್ಕತ್ 4 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ 24 ರನ್ ಗಳಿಸಿದರು.
ಕೆಕೆಆರ್ ನ ಆಂಡ್ರೆ ರಸೆಲ್3 ವಿಕೆಟ್ , ಮಿಚೆಲ್ ಸ್ಟಾರ್ಕ್ 2ವಿಕೆಟ್ , ಹರ್ಷಿತ್ ರಾಣಾ 2 ವಿಕೆಟ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.
ಕೆಕೆಆರ್ ಲೀಗ್ ಹಂತದಲ್ಲೂ ಅದ್ಭುತ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.