Published
7 months agoon
By
Akkare Newsಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ ಇಂದಿನಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ಸೂಚಿಸಿದೆ.
ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ. ಒಂದೇ ಬಾರಿಗೆ ಎರಡೂ ಜೊತೆ ಸಮವಸ್ತ್ರ ನೀಡಲಾಗುತ್ತಿದೆ.
ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮ 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವುದಿಲ್ಲ. ಮುಂದಿನ ವರ್ಷದಿಂದ ಶಾಲೆಗೆ ಸೇರಿಸುವ ಮಕ್ಕಳಿಗೆ ಈ ನಿಯಮ ಕಡ್ಡಾಯ.
ಶಾಲೆಗೆ ಮಕ್ಕಳನ್ನು ಸೇರಿಸುವಾಗ ಜನನ ಪ್ರಮಾಣಪತ್ರ, ಆಸ್ಪತ್ರೆ ದಾಖಲೆ, ಅಂಗನವಾಡಿ, ಆರೋಗ್ಯ ಸಹಾಯಕಿಯರ ದೃಢೀಕರಣ, ಇಲ್ಲವೇ ಪೋಷಕರು ನೀಡುವ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ ಸೇರಿದಂತೆ ಯಾವುದಾದರೂ ಒಂದು ದಾಖಲೆ ಸಲ್ಲಿಸಬೇಕು.