Published
10 months agoon
By
Akkare Newsಹೊಸದಿಲ್ಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕಾಗಿ ಬಹಿರಂಗ ಪ್ರಚಾರಕ್ಕೆ ಮೇ 30ರಂದು ತೆರೆ ಬೀಳಲಿದ್ದು, ಅಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ಧ್ಯಾನಸ್ಥರಾಗಲಿದ್ದಾರೆ!
ತಮಿಳುನಾಡಿನ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕದಲ್ಲಿರುವ ಧ್ಯಾನ ಮಂಟಪಂನಲ್ಲಿ ಮೇ 30ರ ಸಂಜೆಯಿಂದ ಜೂ. 1ರ ವರೆಗೆ ಪ್ರಧಾನಿ ಮೋದಿಯವರು ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯ ಪ್ರಚಾರ ಅಂತ್ಯವಾದಾಗಲೂ ಮೋದಿಯವರು ಉತ್ತರಾಖಂಡದ ಕೇದಾರನಾಥದ ಗುಹೆಯಲ್ಲಿ ಇದೇ ರೀತಿ ಧ್ಯಾನ ಮಾಡಿದ್ದರು.
ಸ್ವಾಮಿ ವಿವೇಕಾನಂದರು ಭಾರತದ ಬಗೆಗೆ ಕಂಡ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವುದು ಕೂಡ ಮೋದಿಯವರ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಅವರು ಧ್ಯಾನಕ್ಕಾಗಿ ಕನ್ಯಾಕುಮಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಗೌತಮ ಬುದ್ಧನ ಬದುಕಿನಲ್ಲಿ ಸಾರನಾಥವು ಹೇಗೆ ಪ್ರಮುಖ ಸ್ಥಾನ ಪಡೆದಿದೆಯೋ ಅದೇ ರೀತಿ ಕನ್ಯಾಕುಮಾರಿಯ ಈ ಸ್ಥಳವು ಸ್ವಾಮಿ ವಿವೇಕಾನಂದರ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಇಲ್ಲೇ ವಿವೇಕಾನಂದರು 3 ದಿನ ಧ್ಯಾನಸ್ಥರಾಗಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಕಂಡಿದ್ದರು.
ಕನ್ಯಾಕುಮಾರಿಯ ವಿಶೇಷತೆಗಳೇನು?
– ಸ್ವಾಮಿ ವಿವೇಕಾನಂದರು ಭಾರತಮಾತೆಯ ಪರಿಕಲ್ಪನೆಯನ್ನು ಹೊಂದಿದ್ದು ಕನ್ಯಾಕುಮಾರಿಯಲ್ಲೇ. ಗೌತಮ ಬುದ್ಧನಿಗೆ ಸಾರನಾಥದಂತೆ ವಿವೇಕಾನಂದರ ಬದುಕಿನಲ್ಲಿ ಕನ್ಯಾಕುಮಾರಿ ಎಂದು ನಂಬಲಾಗಿದೆ
– ಇಲ್ಲಿನ ಧ್ಯಾನ ಮಂಟಪಂನಲ್ಲಿ ಸ್ವಾಮಿ ವಿವೇಕಾನಂದರು 3 ದಿನ ಧ್ಯಾನ ಮಾಡಿದ್ದರು
– ಪೌರಾಣಿಕವಾಗಿಯೂ ಈ ಸ್ಥಳ ಮಹತ್ವ ಪಡೆದಿದೆ. ಶಿವನಿಗಾಗಿ ಕಾಯುತ್ತ ದೇವಿ ಪಾರ್ವತಿಯು ಇದೇ ಸ್ಥಳದಲ್ಲಿ ಧ್ಯಾನ ಮಾಡಿದ್ದಳು ಎಂಬ ಪ್ರತೀತಿಯಿದೆ.
– ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯ ಪ್ರದೇಶ. ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಬೆಸೆಯುವ ಬಿಂದುವೂ ಹೌದು.
– ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬಿ ಸಮುದ್ರ ಸಂಗಮವಾಗುವ ಸ್ಥಳವಿದು.