Published
10 months agoon
By
Akkare Newsಭಾರತದ ಚೆಸ್ ಚತುರ ಆರ್. ಪ್ರಜ್ಞಾನಂದ ಅವರು 2024 ರ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದ್ದರು. ಈ ಗೆಲುವಿನ ಮೂಲಕ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್. ಪ್ರಜ್ಞಾನಂದ ಭಾರತದ ಅಗ್ರ ಶ್ರೇಯಾಂಕಿತ ಚೆಸ್ ಪಟುವಾಗಿ ಹೊರಹೊಮ್ಮಿದ್ದರು. ಇದೀಗ ವಿಶ್ವದ ನಂಬರ್ 1 ಸ್ಪರ್ಧಿಗೆ ಸೋಲುಣಿಸಿ ಮಿಂಚಿದ್ದಾರೆ.
ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ಸೋಲುಣಿಸಿದ್ದಾರೆ. ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ಗೇಮ್ನ ಮೂರನೇ ಸುತ್ತಿನಲ್ಲಿ ಕಾರ್ಲ್‌ಸೆನ್ ವಿರುದ್ಧ ಗೆಲ್ಲುವ ಮೂಲಕ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನಲ್ಲಿ ಆರ್. ಪ್ರಜ್ಞಾನಂದ ವಿರುದ್ಧ ಮ್ಯಾಗ್ನಸ್ ಕಾರ್ಲ್‌ಸೆನ್ ಜಯ ಸಾಧಿಸಿದ್ದರು. ಅಲ್ಲದೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ ಪ್ರಜ್ಞಾನಂದ ಅವರ ಕನಸಿಗೆ ಅಡ್ಡಿಯಾಗಿದ್ದರು.
ಇದೀಗ ಕ್ಲಾಸಿಕಲ್ ಗೇಮ್ನಲ್ಲಿ ಮೊದಲ ಬಾರಿಗೆ ಮ್ಯಾಗ್ನಸ್ ಕಾರ್ಲ್ಸೆನ್ಗೆ ಸೋಲುಣಿಸುವಲ್ಲಿ ಆರ್. ಪ್ರಜ್ಞಾನಂದ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಳೆಯ ಸೋಲಿನ ಲೆಕ್ಕ ಚುಕ್ತಾ ಮಾಡಿದ್ದಾರೆ. ಹಾಗೆಯೇ ಈ ಗೆಲುವಿನೊಂದಿಗೆ ಪ್ರಜ್ಞಾನಂದ ಮುನ್ನಡೆ ಸಾಧಿಸಿದರೆ, ಕಾರ್ಲ್‌ಸೆನ್ ಹಿನ್ನಡೆ ಅನುಭವಿಸಿದ್ದಾರೆ.
ಅದರಂತೆ ಪ್ರಜ್ಞಾನಂದ 9 ಅಂಕಗಳಲ್ಲಿ 5.5 ಪಾಯಿಂಟ್ಸ್ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯೊ ಕರುವಾನಾ ಅವರು ಬುಧವಾರ ಜಿಎಂ ಡಿಂಗ್ ಲಿರೆನ್ ವಿರುದ್ಧ ಗೆದ್ದ ನಂತರ ಮೂರು ಪೂರ್ಣ ಅಂಕಗಳನ್ನು ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಮ್ಯಾಗ್ನಸ್ ಕಾರ್ಲ್‌ಸೆನ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.