ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ಮಳೆಗಾಲದ ವಿಪತ್ತು ನಿರ್ವಹಣೆ ಸಂಪೂರ್ಣ ಸಜ್ಜು: ಮುಲ್ಲೈ ಮುಗಿಲನ್

Published

on

ಮಂಗಳೂರು: ಜೂನ್ ಪ್ರಥಮ ವಾರದಲ್ಲೇ ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ನೆರೆ, ಪ್ರವಾಹ, ಭೂಕುಸಿತ ಪ್ರದೇಶಗಳಲ್ಲಿ ಸಂಭವನೀಯ ಹಾನಿ ನಿಯಂತ್ರಣ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವು ಜೂ. 1ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಹಾಗೂ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆಗಳ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ ಜತೆಗೆ ರಾಜ್ಯ ತಂಡವೂ ಮಂಗಳೂರು ಮತ್ತು ಪುತ್ತೂರಿನಲ್ಲಿ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ 86 ಗ್ರಾಮಗಳನ್ನು ಸಂಭವನೀಯ ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಗ್ರಾಮಗಳ ಒಟ್ಟು 90 ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಹಾಗೂ 73 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 97 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭೂಕುಸಿತ, ಪ್ರವಾಹ, ಅಗ್ನಿ ಅವಘಡ ಸೇರಿದಂತೆ ಇತರ ಯಾವುದೇ ವಿಪತ್ತುಗಳು ಸಂಭವಿಸಿದ್ದಲ್ಲಿ ಸಮರ್ಪಕವಾಗಿ ಎದುರಿಸಲು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಪ್ರತಿ ಗ್ರಾ.ಪಂ., ವಾರ್ಡ್ ಮಟ್ಟದಲ್ಲಿಯೂ ಇನ್‌ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಲಾಗಿದೆ. ಇವರು ಸಂಭವನೀಯ ವಿಪತ್ತು ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ, ಸ್ಥಳೀಯವಾಗಿ ಲಭ್ಯವಿರುವ ಬೋಟ್, ಮರ ಕತ್ತರಿಸುವ ಯಂತ್ರ, ಹಗ್ಗ, ಜೆಸಿಬಿ, ಕ್ರೇನ್ ಮೊದಲಾದ ರಕ್ಷಣಾ ವ್ಯವಸ್ಥೆ, ಮಾನವ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡು ಸಿದ್ಧರಾಗಿರಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ನುರಿತ ಈಜು ತಜ್ಞರು, ಮುಳುಗು ತಜ್ಞರನ್ನು ತಾಲೂಕು ಹಂತದಲ್ಲಿ ಗುರುತಿಸಲಾಗಿದೆ. ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರ, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಕಡಲ ಕಿನಾರೆಗಳಲ್ಲಿ ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24×7 ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮನಪಾ, ಪೊಲೀಸ್ ಇಲಾಖೆ, ಅಗ್ನಿಶಾಮಕ, ಮೆಸ್ಕಾಂ ಇಲಾಖೆಯಲ್ಲಿಯೂ ಕೂಡಾ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮೆಸ್ಕಾಂಗೆ ಸಂಬಂಧಿಸಿದ ದೂರುಗಳಿಗೆ ಆರು ಗಂಟೆಯೊಳಗೆ ಸ್ಪಂದಿಸುವುದು ಹಾಗೂ 24 ಗಂಟೆಯೊಳಗೆ ವಿದ್ಯುತ್ ಪೂರೈಕೆ ಪುನರಾರಂಭಿಸುವ ಕುರಿತಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಪ್ರಾಕೃತಿಕ ವಿಕೋಪದಿಂದ ಒಟ್ಟು 124 ಮನೆಗಳು ಹಾನಿಗೊಳಗಾಗಿವೆ. ಸುಳ್ಯ ತಾಲೂಕಿನಲ್ಲಿ 3 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ವಿವಿಧ ತಾಲೂಕುಗಳಲ್ಲಿ ಒಟ್ಟು 16 ಮನೆಗಳು ತೀವ್ರವಾಗಿ ಹಾಗೂ 105 ಮನೆಗಳು ಭಾಗಶ: ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮಾಹಿತಿ ನೀಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತಾ ಕ್ರಮ ವಹಿಸುವುದು ಹಾಗೂ ಆ್ಯಂಬಲೆನ್ಸ್ ಗಳನ್ನು ಸನ್ನದ್ಧವಾಗಿರಿಸಲು ಆರೋಗ್ಯ ಇಲಾಖೆಗೆ ಸೂಚನೆ, ಮೀನುಗಾರಿಕಾ ನಿಷೇಧ ಅವಧಿಯಲ್ಲಿ ನಾಡದೋಣಿಗಳು ಸಮದ್ರ, ನದಿಗೆ ಹೋಗದಂತೆ ಕಟ್ಟನಿಟ್ಟಿನ ಕ್ರಮ ವಹಿಸಲು ಮೀನುಗಾರಿಕಾ ಇಲಾಖೆಗೆ ನಿರ್ದೇಶನ, ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದಲ್ಲಿ ವಾಹನಗಳು, ಜನಸಾಮಾನ್ಯರು ಆ ಪ್ರದೇಶಕ್ಕೆ ಪ್ರವೇಶಿಸುವ ಮುಂಚಿತವಾಗಿ ಮಾಹಿತಿ ಲಭ್ಯ ಹಾಗೂ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ, ರಸ್ತೆ ಬದಿ, ಕಟ್ಟಡಗಳ ಮೇಲಿನ ಅಪಾಯಕಾರಿ ಜಾಹೀರಾತು ಫಲಕ, ಫ್ಲೆಕ್ಸ್ ಗಳಿದ್ದಲ್ಲಿ ತೆರವಿಗೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ. ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣ.

ಎಣಿಕೆ ಕೇಂದ್ರ ಪ್ರವೇಶಕ್ಕೆ 3 ಹಂತದ ತಪಾಸಣೆ : ಲೋಕಸಭಾ ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಎಪ್ರಿಲ್ 26ರಂದು ನಡೆದಿದ್ದ ಮತದಾನದ ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಸುರತ್ಕಲ್‌ನ ಎನ್‌ಐಟಿಕೆಯ ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆ, ಸಿಸಿ ಕಣ್ಗಾವಲಿನಲ್ಲಿ ಇರಿಸಲಾಗಿರುವ ಇವಿಎಂ ಹಾಗೂ ಅಂಚೆ ಮತಪತ್ರಗಳ ಎಣಿಕೆಯ ಸಂದರ್ಭ ಎಣಿಕೆ ಕೇಂದ್ರಕ್ಕೆ ಚುನಾವಣಾ ಆಯೋಗದ ಅಧಿಕೃತ ಗುರುತಿನ ಚೀಟಿಯವರಿಗೆ 3 ಹಂತದ ತಪಾಸಣೆಯೊಂದಿಗೆ ಪ್ರವೇಶ ದೊರೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಮತ ಎಣಿಕೆ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಮತ ಎಣಿಕೆ ಕೇಂದ್ರದಲ್ಲಿ ಭದ್ರತಾ ಕೊಠಡಿಯು ಬೆಳಗ್ಗೆ 6ರಿಂದ 7ರ ಅವಧಿಯಲ್ಲಿ ತೆರೆಯಲಾಗುತ್ತದೆ ಎಂದರು. 8ಕ್ಕೆ ಆರಂಭದಲ್ಲಿ ಅಂಚೆ ಮತಗಳ ಎಣಿಕೆ, ಬಳಿಕ ಇವಿಎಂ ಮತ ಎಣಿಕೆ 8.30ಕ್ಕೆ ಆರಂಭವಾಗಲಿದೆ. ಕೇಂದ್ರದ ಸುತ್ತಲು 100 ಮೀ. ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಈ ವಲಯವನ್ನು ಪಾದಾಚಾರಿ ವಲಯ ಎಂದು ಘೋಷಿಸಲಾಗಿದೆ. ಮತ ಎಣಿಕೆ ಕೇದ್ರದ ಸುತ್ತ ಹಾಗೂ ಎಣಿಕೆ ಕೇಂದ್ರದ ಕೊಠಡಿಯೊಳಗೆ ಸಿಸಿಟಿವಿ ಕಣ್ಗಾವಲಿದೆ. ಎಣಿಕೆ ಪ್ರಕ್ರಿಯೆ ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಸಲು ಪ್ರತಿ ಎಣಿಕೆ ಮೇಜಿನ ಸಿಬ್ಬಂದಿ ಮತ್ತು ಏಜೆಂಟರ ಮಧ್ಯೆ ಸ್ಟೀಲ್ ಪ್ರೇಮ್ ಜಾಲರಿ ಅಳವಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಏಜೆಂಟರು ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಪ್ರವೇಶಿಸಿರಬೇಕು. ಬಳಿಕ ಅವಕಾಶ ನೀಡಲಾಗದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಇವಿಎಂಗಳಲ್ಲಿ 1409653 ಮತಗಳು ಚಲಾವಣೆಯಾಗಿದ್ದು, ಮನೆಯಿಂದಲೇ ಮತದಾನ, ಸೇವಾ ಮತದಾರರು, ತುರ್ತು ಸೇವೆಯಲ್ಲಿರುವವರು ಸೇರಿದಂತೆ ಮತ ಪತ್ರಗಳ ಮೂಲಕ 8537 ಮತ ಚಲಾವಣೆಯಾಗಿದೆ. ಸೇವಾ ಮತದಾರರಿಗೆ ಒಟ್ಟು 536 ಮತಪತ್ರಗಳನ್ನು ಕಳುಹಿಸಲಾಗಿದ್ದು, ಈವರೆಗೆ 231 ಮತಪತ್ರಗಳು ಸ್ವೀಕೃತವಾಗಿದ್ದು, ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸ್ವೀಕೃತವಾಗುವ ಸೇವಾ ಮತದಾರರ ಮತಪತ್ರಗಳನ್ನು ಸ್ವೀಕರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇವಿಎಂಗಳ ಮತ ಎಣಿಕೆಯು ಪ್ರತಿ ವಿಧಾನಸಭಾ ಕ್ಷೇತ್ರವಾರು ಎಂಟು ಕೊಠಡಿಗಳಲ್ಲಿ ತಲಾ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಮತ ಎಣಿಕೆ ಕೇಂದ್ರಕ್ಕೆ ಈ ವಸ್ತುಗಳು ನಿಷೇಧ : ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಕ್ಯಾಲ್ಕುಲೇಟರ್, ಕತ್ತರಿ, ಚೂರಿ, ಲೈಟರ್, ಬೆಂಕಿಪೊಟ್ಟಣ, ಇಲೆಕ್ಟಾçನಿಕ್ ವಸ್ತುಗಳು, ಶಸ್ತ್ರಾಸ್ತ್ರ, ಸ್ಪೋಟಕಗಳು ನಿಷೇಧಿಸಲ್ಪಟ್ಟಿದ್ದು, ಅಭ್ಯರ್ಥಿಗಳು ಅಥವಾ ಏಜೆಂಟರು ಕೇವಲ ಪೆನ್, ಹಾಳೆ ನೋಟ್‌ಪ್ಯಾಡ್ ಹಾಗೂ 17ಸಿ ಫಾರಂ ಮಾತ್ರವೇ ತಮ್ಮೊಂದಿಗೆ ಕೊಂಡೊಯ್ಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸುರತ್ಕಲ್‌ನ ಎನ್‌ಐಟಿಕೆಯ ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಭದ್ರತೆ ಒದಗಿಸಲಾಗಿದೆ. ಪ್ರತಿ ಪಾಳಿಯಲ್ಲಿ ಸಿವಿಲ್ ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸರು ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಡಿಸಿಪಿ, ಎಸಿಪಿ ಸೇರಿದಂತೆ ಒಟ್ಟು 850 ಪೊಲೀಸ್ ಸಿಬ್ಬಂದಿ ಮತ ಎಣಿಕೆ ದಿನದಂದು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದರು.

ದೂರು ಸಲ್ಲಿಕೆಗೆ ಅವಕಾಶ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಮಾಹಿತಿ ಪಡೆಯಲು ಜೂ. 1ರಿಂದ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಸಾರ್ವಜನಿಕರು ಈ ಸಂಬಂಧ 1950 ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಪಾರ್ಕಿಂಗ್ ವ್ಯವಸ್ಥೆ : ಅಭ್ಯರ್ಥಿ ಹಾಗೂ ಏಜೆಂಟರಿಗೆ ಪ್ರಮುಖ ದ್ವಾರದ ಮಹಿಳಾ ಹಾಸ್ಟೆಲ್ ಪಕ್ಕದಲ್ಲಿ.
ಕೌಂಟಿಗ್ ಏಜೆಂಟ್ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಕ ಸರ್ಕಲ್ ಬಳಿಯ ಸ್ಟೇಡಿಯಂ ಬಳಿ. ಭದ್ರತಾ ಕೊಠಡಿಯಲ್ಲಿ ದಾಖಲೆಗಳ ಠೇವಣಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಮುಕ್ತಾಯವಾದ ಬಳಿಕ ಮತಯಂತ್ರ ಮತ್ತು ಚುನಾವಣಾ ದಾಖಲೆಗಳ್ನು ಜಿಲ್ಲಾ ಭದ್ರತಾ ಕೊಠಡಿಯಲ್ಲಿ ಠೇವಣಿ ಇರಿಸಲಾಗುತ್ತದೆ. 25 ದಿನಗಳವರೆಗೆ ಮತಯಂತ್ರಗಳ ಸಂರಕ್ಷಣೆ ಚುನಾವಣಾ ಫಲಿತಾಂಶದ ದಿನದಂತು ವಿಜಯೋತ್ಸವ ಆಚರಣೆ ಸಂದರ್ಭ ಸಿಡಿಮದ್ದು, ಪಟಾಕಿ ಸಿಡಿಸುವುದನ್ನು ಜೂ. 6ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದ.ಕ. ಜಿಲ್ಲೆಯಾದ್ಯಂತ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಸಂವಾದ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರಿನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಮಂಗಳೂರು ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement