Published
7 months agoon
By
Akkare Newsಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಭೇಟಿ
ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮನೆಗೆ ಬುಧವಾರ ಬಿಜೆಪಿ ನಾಯಕರು ಭೇಟಿ ನೀಡಿ, ಕೆಲಹೊತ್ತು ಸಮಾಲೋಚನೆ ನಡೆಸಿದರು.
ಬೆಳಗ್ಗೆಯಿಂದ ಸುರೇಶ್ ಅವರ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದಂಡು ಭೇಟಿ ನೀಡುತ್ತಲೇ ಇತ್ತು. ಈ ನಡುವೆ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಕೂಡ ಆಗಮಿಸಿ ಫಲಿತಾಂಶದ ಪರಾಮರ್ಶೆ ಮಾಡಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರನ್ನು ಜನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೇ ತಮ್ಮ ತಪ್ಪಿನ ಅರಿವಾಗಲಿದೆ. ಎಲ್ಲರೂ ಸೇರಿ ಈ ಬಾರಿ ಅವರನ್ನು ಟಾರ್ಗೆಟ್ ಮಾಡಿದರು. ದಿನದ 24 ಗಂಟೆ ರಾಜಕಾರಣ ಮಾಡಿದವರು. ಕ್ಷೇತ್ರದ ಸೇವೆ ಮಾಡಿದ ಸುರೇಶ್ ಅವರನ್ನು ಯಾಕೆ ಸೋಲಿಸಿದೆವು ಅಂತಾ ಜನ ಯೋಚನೆ ಮಾಡಲಿದ್ದಾರೆ ಎಂದರು.
ಇನ್ನು ಉಡುಪಿ-ಚಿಕ್ಕಮಗಳೂರಿನವರೇ ಗೋಬ್ಯಾಕ್ ಅಂದಿದ್ದರು. ಅಂತಹವರನ್ನು ಗೆಲ್ಲಿಸಿದ್ದಾರೆ. ಜನರೇ ಮತ ಕೊಟ್ಟಿದ್ದಾರೆ. ನಾವು ಅದನ್ನು ಸ್ವಾಗತ ಮಾಡುತ್ತೇವೆ. ವಿಧಾನಸಭೆ ಬೇರೆ, ಲೋಕಸಭೆ ಬೇರೆ ಎಂದ ಅವರು, ಕಳೆದ ಬಾರಿ ಕಾಂಗ್ರೆಸ್‌ಗೆ ಒಂದು ಸ್ಥಾನ ಇತ್ತು. ಈ ಸಲ ಒಂಬತ್ತು ಆಗಿದೆ. ಜನರು ಕಾಂಗ್ರೆಸ್ ಪರ ಮತ ಕೊಟ್ಟಿದ್ದಾರೆ ಎಂದರು.