ಚಿತ್ರದುರ್ಗ: ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿಗೆ ದೆವ್ವ ಹಿಡಿದಿದೆ ಎಂದು ನಂಬಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ ನಗರದ ಮಸೀದಿಯೊಂದರ ಮೌಲ್ವಿ ಹಾಗೂ ಬಾಲಕಿಯ ಸಹೋದರನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಉತ್ತರಪ್ರದೇಶ ಮೂಲದ ಮೌಲ್ವಿ ಅಬ್ದುಲ್ ರೆಹಮಾನ್ ಹಾಗೂ ಬಾಲಕಿಯ ಸಹೋದರ ಎಂದು ತಿಳಿದು ಬಂದಿದೆ.
17ವರ್ಷದ ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಹೋಗುತ್ತಿದ್ದಳು. ಒಂದು ವರ್ಷದ ಹಿಂದೆ ಈ ಬಾಲಕಿಗೆ ಗಾಳಿ ಸೋಕಿದೆ, ನಿಮ್ಮ ಮನೆಯಲ್ಲಿ ದೈವಕಾರ್ಯ ಮಾಡಿಸಬೇಕು ಎಂದು ಬಾಲಕಿಯ ತಾಯಿಯನ್ನು ಮೌಲ್ವಿ ನಂಬಿಸಿದ್ದ.
ಬಳಿಕ ಪ್ರತಿ ವಾರ ಮನೆಗೆ ಹೋಗಿ ಧಾರ್ಮಿಕ ಕ್ರಿಯೆ ಮಾಡುವಾಗ ಬಾಲಕಿಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ಆರು ತಿಂಗಳ ಹಿಂದೆ ಬಾಲಕಿಯ ಸಹೋದರ ಹಾಗೂ ಮೌಲ್ವಿಯು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು, ತಾಯಿಯನ್ನು ಹೊರಗೆ ಕಳುಹಿಸಿದ್ದರು.
ದೆವ್ವಕ್ಕೆ ದೈಹಿಕ ಸುಖ ಕೊಟ್ಟರೆ ಶಾಂತಿಯಾಗಲಿದೆ ಎಂದು ಬಾಲಕಿಯ ಸಹೋದರನನ್ನೂ ನಂಬಿಸಿ ಆತನಿಂದಲೇ ಅತ್ಯಾಚಾರ ಮಾಡಿಸಿದ್ದ ಮೌಲ್ವಿ, ಅದನ್ನು ವೀಡಿಯೊ ಚಿತ್ರೀಕರಿಸಿಕೊಂಡಿದ್ದ. ಬಳಿಕ ತಾನೂ ಅತ್ಯಾಚಾರ ಎಸಗಿದ್ದ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೇ 30ರಂದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಗರ್ಭಪಾತವಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರದ ಮಹಿಳಾ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.