ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಬ್ರೇಕಿಂಗ್ ನ್ಯೂಸ್

ಗಾಯಕ ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ?

Published

on

ಬೆಂಗಳೂರು: ಕನ್ನಡದ ಪ್ರಸಿದ್ದ ರಾಪರ್, ನಟ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅವರ ನಾಲ್ಕು ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಸೀಸನ್ 5 ನಲ್ಲಿ ಪರಿಚಯವಾಗಿ ಬಳಿಕ ವಿವಾಹವಾಗಿದ್ದ ಈ ಜೋಡಿ ಇದೀಗ ದೂರವಾಗಿದೆ ಎನ್ನಲಾಗಿದೆ.’ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಮತ್ತು ಗಾಯಕ/ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ದಾಂಪತ್ಯ ಬದುಕು ಅಂತ್ಯಗೊಂಡಿದೆ. 2020ರ ಫೆಬ್ರವರಿಯಲ್ಲಿ ಇವರಿಬ್ಬರು ಒಟ್ಟಿಗೆ ಸಾಂಸಾರಿಕ ಬದುಕಿಗೆ ಕಾಲಿಟ್ಟಿದ್ದರು. ಆದರೆ ನಾಲ್ಕೇ ವರ್ಷಕ್ಕೆ ದಾಂಪತ್ಯ ಮುರಿದುಬಿದ್ದಿದೆ. ಈ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಇಬ್ಬರು ಕೂಡ ಹೇಳಿಕೊಂಡಿಲ್ಲ. ಆದರೆ ಇದರ ಬಗ್ಗೆ ಮೊದಲ ಪ್ರತಿಕ್ರಿಯೆಯನ್ನು ನಿವೇದಿತಾ ಮತ್ತು ಚಂದನ್ ನೀಡಿದ್ದಾರೆ. “ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ” ಎಂದು ಈ ಮಾಜಿ ದಂಪತಿ ತಿಳಿಸಿದ್ದಾರೆ.

ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಇಂದು (ಜೂನ್ 7) ಚಂದನ್ ಶೆಟ್ಟಿ ಮತ್ತು ನಿವೇದಿತಾಗೆ ವಿಚ್ಚೇದನ ಮಂಜೂರು ಮಾಡಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಈವರೆಗೂ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸಾರ್ವಜನಿಕವಾಗಿ ಮನಸ್ತಾಪ ಹೊರಹಾಕಿರಲಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ವಿಚ್ಚೇದನ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಇದುವರೆಗೆ ಇಬ್ಬರೂ ಅಧಿಕೃತ ಹೇಳಿಕೆ ನೀಡಿಲ್ಲ.

 

ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಮೊದಲ ಬಾರಿಗೆ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ, ಪ್ರೀತಿಯಾಗಿ ಬಳಿಕ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿದ್ದರು.

2020ರ ಫೆಬ್ರವರಿ 26ರಂದು ಚಂದನ್ ಶೆಟ್ಟಿ – ನಿವೇದಿತಾ ವಿವಾಹವಾಗಿದ್ದರು. ಇದೀಗ ನಾಲ್ಕು ವರ್ಷದ ಸಾಂಸಾರಿಕ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ.

ರಿಯಾಕ್ಷನ್ ಪೋಸ್ಟ್ ಮಾಡಿದ ನಿವಿ & ಚಂದು

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, “ಈ ದಿನ ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು..” ಎಂದು ಬರೆದುಕೊಂಡಿದ್ದಾರೆ.

ಒಟ್ಟಿಗೆ ಕೋರ್ಟ್‌ಗೆ ಬಂದ ನಿವಿ & ಚಂದನ್‌

ಇಂದು (ಜೂನ್ 7) ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ನಿವೇದಿತಾ ಮತ್ತು ಚಂದನ್ ಒಟ್ಟಿಗೆ ಆಗಮಿಸಿದ್ದರು. ಜೂನ್ 7ರಂದು ಶಾಂತಿನಗರದಲ್ಲಿರುವ ಕೌಟುಂಬಿಕ ಕೋರ್ಟ್‌ಗೆ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ ಇವರು, ಇಂದು ಕೋರ್ಟ್‌ಗೆ ಹಾಜರಾಗಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಈ ವಿಚ್ಛೇದನಕ್ಕೆ ಮುಂದಾಗಿದ್ದಾರೆ.ಮೂಲಗಳ ಪ್ರಕಾರ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಿವೇದಿತಾ ಗೌಡ ವಿದೇಶಕ್ಕೆ ತೆರಳಲು ಬಯಸಿದ್ದಾರಂತೆ. ಅದಕ್ಕಾಗಿಯ ವಿಚ್ಚೇದನ ಪಡೆಯುತ್ತಿದ್ದೇನೆ ಎಂದು ಆಪ್ತರ ಬಳಿ ಚಂದನ್ ಹೇಳಿಕೊಂಡಿದ್ದಾರಂತೆ. ಇನ್ನು, ಕೋರ್ಟ್‌ನಿಂದ ಹೊರಗೆ ಹೋಗುವಾಗಲೂ ಇಬ್ಬರು ಒಟ್ಟೊಟ್ಟಿಗೆ ಕೈ ಹಿಡಿದುಕೊಂಡೇ ಹೋದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಕೂಡ ಪೋಸ್ಟ್ ಹಂಚಿಕೊಂಡಿದ್ದು, ಇದರಾಚೆಗೆ ಮಾಧ್ಯಮಗಳ ಮುಂದೆ ಬರದೇ ಇರಲು ಇವರಿಬ್ಬರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement