Published
7 months agoon
By
Akkare Newsನಕಾರಾತ್ಮಕ ರಾಜಕೀಯ ಕೊನೆಗೊಂಡಿದ್ದು, ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಇದು ಒಂದೆಡೆ ಇಂಡಿಯಾ ಮೈತ್ರಿಕೂಟದ ಗೆಲುವು, ಪಿಡಿಎ ಕಾರ್ಯತಂತ್ರಕ್ಕೆ ಸಿಕ್ಕದ ಗೆಲುವು, ಸಮಾಜವಾದಿ ಪಕ್ಷವು ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಜನ ಬೆಂಬಲ ಸಿಕ್ಕಿದೆ. ಅದೇ ಸಮಯದಲ್ಲಿ, ಸಮಾಜವಾದಿಯ ಜವಾಬ್ದಾರಿಯೂ ಹೆಚ್ಚಾಗಿದೆ, ಅದು ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು, ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದೇವೆ. ಋಣಾತ್ಮಕ ರಾಜಕಾರಣ ಕೊನೆಗೊಂಡಿದ್ದು, ಸಕಾರಾತ್ಮಕ ರಾಜಕಾರಣ ಆರಂಭವಾಗಿದೆ. ಜನರಿಗೆ ಸಂಬಂಧಿಸಿದ ವಿಷಯಗಳಿಗೆ ಜಯ ಸಿಕ್ಕಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದಿದ್ದರೆ, ಮಿತ್ರಪಕ್ಷ ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಕಂಡುಕೊಂಡಿದೆ. ಬಿಜೆಪಿ 33 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಮತ್ತು ಅದರ ಮಿತ್ರಪಕ್ಷಗಳಾದ ಆರ್‌ಎಲ್‌ಡಿ ಮತ್ತು ಅಪ್ನಾ ದಳ(ಸೋನೆಲಾಲ್) ಕ್ರಮವಾಗಿ ಎರಡು ಸ್ಥಾನ ಮತ್ತು ಒಂದು ಸ್ಥಾನವನ್ನು ಗೆದ್ದಿದೆ. ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) ಒಂದು ಸ್ಥಾನವನ್ನು ಗೆದ್ದರೆ, ಬಿಎಸ್‌ಪಿ ಯಾವುದೇ ಸ್ಥಾನವನ್ನು ಗೆದ್ದುಕೊಂಡಿಲ್ಲ.
ಸುದ್ದಿಗೋಷ್ಟಿಯಲ್ಲಿ ಅಖಿಲೇಶ್ ಯಾದವ್ ಜೊತೆಗೆ ಪಕ್ಷದ ಹಿರಿಯ ನಾಯಕರಾದ ಶಿವಪಾಲ್ ಸಿಂಗ್ ಯಾದವ್ ಮತ್ತು ರಾಮಗೋಪಾಲ್ ಯಾದವ್, ಹೊಸದಾಗಿ ಚುನಾಯಿತ ಸಂಸದರಾದ ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಆದಿತ್ಯ ಯಾದವ್, ಅಕ್ಷಯ ಯಾದವ್ ಮತ್ತು ಅಫ್ಜಲ್ ಅನ್ಸಾರಿ ಉಪಸ್ಥಿತರಿದ್ದರು.