ಒಂದು ಕಡೆ ಗೋವನ್ನು ರಕ್ಷಿಸಬೇಕು ಎಂಬ ಕೂಗು ಜೋರಾಗಿದೆ. ಮತ್ತೊಂದು ಕಡೆ ಗೋವನ್ನು ಕದ್ದು ಕಸಾಯಿಖಾನೆಗೆ ರವಾನಿಸುತ್ತಿರುವ ಘಟನೆ ನಿತ್ಯ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿದ್ದರೂ ಈ ಬಗ್ಗೆ ಯಾರಿಗೂ ಗೊಡವೆಯೇ ಇಲ್ಲ..!
ಸಂಪಾಜೆ ಗ್ರಾಮ ಪಂಚಾಯತ್ ಭಾಗದಲ್ಲಿ ಬೀಡಾಡಿ ದನಗಳಿವೆ. ಭಾರಿ ಸಂಖ್ಯೆಯಲ್ಲಿರುವ ಇವುಗಳು ಆಗಾಗ್ಗೆ ವಾಹನ ಸವಾರರಿಗೆ ಹಗಲು ಹಾಗೂ ರಾತ್ರಿ ಹೊತ್ತಿನಲ್ಲಿ ಒಂದೇ ಸಮನೆ ಕಿರಿಕ್ ಮಾಡುತ್ತವೆ. ಎಷ್ಟೋ ಸಲ ಇವುಗಳಿಂದಲೇ ಅಪಘಾತಗಳಾಗಿವೆ.
ಈ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧ ಪಟ್ಟ ಹಸುಗಳ ಮಾಲೀಕರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.
ಇಂತಹ ಸಮಯದಲ್ಲಿ ಸಂಪಾಜೆಯ ಗಡಿಕಲ್ಲು ಸಮೀಪ ಶುಕ್ರವಾರ (ಜೂ.7) ರಾತ್ರಿ ಮಲಗಿದ್ದ ಹಸುವನ್ನು ಪ್ರಜ್ಞೆ ತಪ್ಪಿಸಿ ಅಪರಿಚಿತರು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.
ಈ ದೃಶ್ಯಾವಳಿಗಳು ಸಮೀಪದ ಮನೆಯೊಂದರ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಮೊದಲ ಹಸುವನ್ನು ಪ್ರಜ್ಞೆ ತಪ್ಪಿಸಿ ವಾಹನಕ್ಕೆ ತುಂಬಿಸಿ ಎರಡನೇ ಹಸುವನ್ನು ತುಂಬಿಸುವ ಸಂದರ್ಭ ದಲ್ಲಿ ಸ್ಥಳೀಯರಿಗೆ ಗೊತ್ತಾಗಿದೆ. ಈ ವೇಳೆ ಅಪರಿಚಿತರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಕರ್ನಾಟಕ ಕೇರಳ ಗಡಿ ಪ್ರದೇಶದ ಚೆಕ್ ಪೋಸ್ಟ್ ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮತ್ತು ರಾತ್ರಿ ವೇಳೆ ಪೊಲೀಸರಿಗೆ ರಕ್ಷಣೆಗಾಗಿ ಬಂದೂಕು ನೀಡಬೇಕು ಮತ್ತು ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಾಹನಗಳನ್ನು ತನಿಖೆ ಮಾಡಬೇಕಾಗಿ ಸಾರ್ವಜನಿಕರ ಒತ್ತಾಯ