Published
7 months agoon
By
Akkare Newsಪುತ್ತೂರು: ಗ್ರಾಮ, ತೋಡಕ್ಕೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಎರಡು ಆನೆಗಳ ಬಂಧಿಸುವ ಕಾರ್ಯಾಚರಣೆಗೆ ಹಾಸನ ಹಾಗೂ ಕುಶಾಲನಗರದ ಮಾವುತರ ತಂಡ ಪುತ್ತೂರಿಗೆ ಆಗಮಿಸಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ಪುತ್ತೂರು ಆಸುಪಾಸಿನ ಪ್ರದೇಶಗಳ ತೋಟಗಳಿಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿದ್ದ ಆನೆಗಳು ಮಂಗಳವಾರ ಬೆಳಿಗ್ಗೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಪತ್ತೆಯಾಗಿವೆ
ಕೆಲ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿವೆ. ತೋಟದಲ್ಲಿ ಆನೆ ಲದ್ದಿಯೂ ಪತ್ತೆಯಾಗಿದೆ.
ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಅಲ್ಲಿಂದ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಕೆಲವು ತಿಂಗಳು ಕಳೆದ ನಂತರ ಆನೆ ಸವಣೂರು ಗ್ರಾಮದ ಕುಮಾರಮಂಗಲ, ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿತ್ತು.
ಜೂ. 5 ರಂದು ಸವಣೂರು ಗ್ರಾಮದಿಂದ ಆನೆ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರಕ್ಕೆ ತೆರಳಿತ್ತು. ಅಲ್ಲಿಯೂ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿದ್ದ ಆನೆಯನ್ನು ಅರಣ್ಯ ಇಲಾಖೆಯವರು ಮತ್ತೆ ಹಿಂದಿರುಗುವಂತೆ ಮಾಡಿದ್ದರು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಕಾಲಿಟ್ಟಿತ್ತು. ಜೂ.10 ಕ್ಕೆ ಶಾಂತಿಗೋಡು ಗ್ರಾಮಕ್ಕೆ ತಲುಪಿತ್ತು. ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೂ ನುಗ್ಗಿತ್ತು. ಅಲ್ಲಿಂದ ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ.