Published
6 months agoon
By
Akkare Newsರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಸಿನಿಮಾ ನಟ ದರ್ಶನ್‌ಗೆ ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರಿಸುವುದು ಅಸಾಧ್ಯ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ 2021ರಲ್ಲಿ ನೇಮಕ ಮಾಡಲಾಗಿತ್ತು. ರೈತರ ಹಿತಕ್ಕಾಗಿ ಕೈಗೊಂಡ ಕಾರ್ಯಕ್ರಮಗಳ ಪ್ರಚಾರ, ಕೃಷಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಸಲುವಾಗಿ ಕೃಷಿ ಇಲಾಖೆಯಲ್ಲಿ ರಾಯಭಾರಿಯನ್ನು ನೇಮಕ ಮಾಡಲಾಗಿತ್ತು.
ಆದರೆ ಪ್ರಸ್ತುತ ಕೊಲೆ ಆರೋಪವನ್ನು ಹೊತ್ತಿರುವ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಮುಂದುವರಿಸುವುದಕ್ಕೆ ಸರಕಾರ ಅಸಮ್ಮತಿಯನ್ನು ಸೂಚಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ದರ್ಶನ್‌ಗೆ ವಿಐಪಿ ಸೌಕರ್ಯ ನೀಡಿಲ್ಲ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಹಿಸಿದ್ದಾನೆ ಎಂಬ ಆರೋಪದಲ್ಲಿ ಚಿತ್ರದುರ್ಗದ ಅಪೋಲೋ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ದರ್ಶನ್ ಮತ್ತು ಗ್ಯಾಂಗ್ ಅಪಹರಿಸಿ, ಕೊಲೆ ಮಾಡಿ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕಸದ ತೊಟ್ಟಿಯಲ್ಲಿ ಎಸೆದು ಹೋಗಿದ್ದರು. ಪ್ರಕರಣದಲ್ಲಿ ಇಲ್ಲಿಯವರೆಗೂ ಬರೋಬ್ಬರಿ 17 ಆರೋಪಿಗಳ ಪೈಕಿ 13 ಜನರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಘಟನೆ ಬಳಿಕ ನಾಪತ್ತೆ ಆಗಿದ್ದರು. ಇದೀಗ ಆ ನಾಲ್ವರ ಪೈಕಿ ಓರ್ವ ಇಂದು ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಕೇಸ್ನ 8ನೇ ಆರೋಪಿ ಆಗಿರುವ ಆಟೋ ಚಾಲಕ ರವಿಶಂಕರ್ ಇಂದು ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಬಂದು ಶರಣಾಗಿದ್ದಾನೆ.
ದರ್ಶನ್ ಭೇಟಿಗೆಂದು ಹೇಳಿ ರೇಣುಕಾಸ್ವಾಮಿಯನ್ನು ಗ್ಯಾಂಗ್ ಕರೆತಂದಿತ್ತು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ದರ್ಶನ್ ಭೇಟಿಗೆ ತೆರಳಿದ್ದ. ಆತನನ್ನು ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿಯ ಪಟ್ಟಣಗೆರೆ ಶೆಡ್ಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.