ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಶಾಸಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ; ಮನಸ್ಸಿಗೆ ಅತ್ಯಂತ ಭಾರವಾದ ದಿನ ಎಂದ ಬೊಮ್ಮಾಯಿ

Published

on

ಶಿಗ್ಗಾಂವಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಶನಿವಾರ(ಜೂ.15) ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದರು.
ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ನೀಡಿದರು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದ ಬೊಮ್ಮಾಯಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಗೆಲುವಿನ ನಗೆ ಬೀರಿದ್ದರು.7,05,538 ಮತಗಳನ್ನು ಪಡೆದಿದ್ದ ಬಸವರಾಜ ಬೊಮ್ಮಾಯಿ ಅವರು, 43,513 ಮತಗಳ​ ಅಂತರದಿಂದ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಗೆದ್ದಿದ್ದರು.

ಮನಸ್ಸಿಗೆ ಅತ್ಯಂತ ಭಾರವಾದ ದಿನ : ಬೊಮ್ಮಾಯಿ ಟ್ವೀಟ್

ತಮ್ಮ ರಾಜೀನಾಮೆ ಬಗ್ಗೆ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಇಂದು ನನ್ನ ಮನಸ್ಸಿಗೆ ಅತ್ಯಂತ ಭಾರವಾದ ದಿನ. ಸತತ ನಾಲ್ಕು ಬಾರಿ ನನ್ನನ್ನು ಶಾಸಕನಾಗಿ, ಸಚಿವನಾಗಿ, ಈ ನಾಡಿನ ಮುಖ್ಯಮಂತ್ರಿಯಾಗಲು ಕಾರಣಿಭೂತರಾದ ಶಿಗ್ಗಾಂವಿ-ಸವಣೂರಿನ ಸಮಸ್ತ ಜನತೆಯನ್ನು ನನ್ನ ಹೃದಯಮಂದಿರದಲ್ಲಿ ಸ್ಮರಿಸುತ್ತಾ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಬರೆದುಕೊಂಡಿದ್ದಾರೆ.

1990ರ ದಶಕದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ವಿಧಾನಸೌಧದ ಮೇಲ್ಮನೆ ಹಾಗೂ ಕೆಳಮನೆಯ ಸದಸ್ಯನಾಗಿ ಅತ್ಯಂತ ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ.

ಹಾವೇರಿ – ಗದಗದ ಸಂಸದನಾಗಿ ಸಂಸತ್‌ ನಲ್ಲಿ ಪ್ರಾಮಾಣಿಕವಾಗಿ ಕನ್ನಡ ಹಾಗೂ ಕರ್ನಾಟಕದ ಪರ ಧ್ವನಿ ಎತ್ತುವ ಸಂಪೂರ್ಣ ಜವಾಬ್ದಾರಿ ನನ್ನದು. ನೀರಾವರಿ ನನ್ನ ಬಹು ಇಷ್ಟದ ವಲಯವಾಗಿದ್ದು ಕರ್ನಾಟಕದ ನೀರಾವರಿ ಯೋಜನೆಗಳಾದ ಕೃಷ್ಣಾ, ಕಾವೇರಿ ಅಂತರಾಜ್ಯ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನಾನು ದೆಹಲಿಗೆ ಹೋದರೂ ಕರ್ನಾಟಕದ ರಾಜಕಾರಣದಲ್ಲಿ ಸಕ್ರೀಯವಾಗಿರುತ್ತೇನೆ. ಈ ಹಿಂದೆ ನಾವು ಎಐಬಿಪಿಯಲ್ಲಿ ಸುಮಾರು ಆರು ತಿಂಗಳು ದೆಹಲಿಯಲ್ಲಿ ನಮ್ಮ ಅಧಿಕಾರಿಗಳನ್ನು ಇಟ್ಟು ಸುಮಾರು 3800 ಕೊಟಿ ರೂ. ತಂದಿದ್ದೆವು. ಕೇಂದ್ರದ ಬಜೆಟ್‌ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟಿರುವ 5000 ಕೋಟಿ ರೂ. ತರಲು ರಾಜ್ಯದ ಸಚಿವರು ಹಾಗೂ ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತನಾಡಿ ಹಣ ತರಲು ಪ್ರಯತ್ನಿಸುತ್ತೇನೆ.

 

 

ಒಬ್ಬ ಸಂಸದನಾಗಿ ಹಾವೇರಿ-ಗದಗ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸದಾ ನಾನು ಕಾರ್ಯೊನ್ಮುಖಿಯಾಗಿರುತ್ತೇನೆ ಹಾಗೂ ಶಿಗ್ಗಾಂವಿ-ಸವಣೂರಿನ ಅಭಿವೃದ್ಧಿಗೆ ನನ್ನ ಶ್ರಮ ಎಂದಿನಂತೆ ಮುಂದುವರೆಯಲಿದೆ ಎಂದು ಬರೆದುಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement