Published
6 months agoon
By
Akkare Newsಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.
ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.