Published
6 months agoon
By
Akkare Newsಈ ಸಮಿತಿಯು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ರೋಜಿ ಜಾನ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಉಸ್ತುವಾರಿಯಲ್ಲಿ ರಚಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಮಿತಿಗೆ 10 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ರೈ, ಉಡುಪಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗ್ಡೆ, ದ.ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ ಮತ್ತು ಕಿಶನ್ ಹೆಗ್ಡೆ ಸಮಿತಿಯಲ್ಲಿ ಸದಸ್ಯರು.
ಉಪಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳನ್ನು ಕೆಪಿಸಿಸಿಗೆ ಶಿಫಾರಸು ಮಾಡುವುದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕ್ರಮ ಕೈಗೊಳ್ಳುವುದು, ಹಿರಿಯರು ಮತ್ತು ನಾಯಕರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣವೇ ಕೆಪಿಸಿಸಿ ಅಧ್ಯಕ್ಷರು ಈ ಸಮಿತಿಗೆ ಸೂಚನೆ ನೀಡಿದ್ದಾರೆ.
ಈ ಸಮಿತಿಯಲ್ಲಿರುವ 12 ಮಂದಿಯಲ್ಲಿ 6 ಮಂದಿ ಬಂಟರು, ಮೂವರು ಬಿಲ್ಲವರಿಗೆ ಅವಕಾಶ ನೀಡಲಾಗಿದೆ. ಆದರೆ ಒಬ್ಬ ಮುಸ್ಲಿಮರಿಗೂ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಪ್ರಸ್ತುತ ನ್ಯೂಸ್ ದ.ಕ ಜಿಲ್ಲಾ ಕಾಂಗ್ರೆಸ್‌ನ ಮುಸ್ಲಿಂ ಮುಖಂಡೊಬ್ಬರನ್ನು ಸಂಪರ್ಕಿಸಿದಾಗ ಅವರು ಪಕ್ಷದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ದ.ಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಇನಾಯತ್ ಅಲಿ, ಕಣಚೂರು ಮೋನು, ಎಂ.ಎಸ್ ಮುಹಮ್ಮದ್, ಶಾಹುಲ್ ಹಮೀದ್ ಕೆ.ಕೆ ಸೇರಿದಂತೆ ಹಲವು ಮುಖಂಡರಿದ್ದರೂ ಒಬ್ಬರನ್ನೂ ಸಮಿತಿಗೆ ಸೇರಿಸಿಕೊಳ್ಳದಿರುವುದು ಮುಸ್ಲಿಂ ಸಮುದಾಯಕ್ಕೆ ಮಾಡಿರುವ ದ್ರೋಹ ಎಂದು ಅಳಲು ತೋಡಿಕೊಂಡರು.
ಕರಾವಳಿಯ ಮುಸ್ಲಿಮರು ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದರೂ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಸತತವಾಗಿ ಕಡೆಗಣಿಸುತ್ತಾ ಬಂದಿದೆ. ನಿಗಮ ಮಂಡಳಿ ಆಯ್ಕೆ, ಪರಿಷತ್ ಅಭ್ಯರ್ಥಿ ಆಯ್ಕೆ ವೇಳೆ ಕರಾವಳಿಯ ಮುಸ್ಲಿಮರನ್ನು ಕಡೆಗಣಿಸಲಾಗಿದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಚೊಂಬು ನೀಡುತ್ತಾ ಬಂದಿದೆ. ಈಗ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲೂ ಮುಸ್ಲಿಮರನ್ನು ಕಡೆಗಣಿಸಲಾಗಿದೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಅವಮಾನ ಆಗಿದ್ದು, ಆಗಿರುವ ತಪ್ಪನ್ನು ಸರಿಪಡಿಸಬೇಕಾಗಿ ಮುಖಂಡರ ಬಳಿ ಕೇಳಿಕೊಂಡಿದ್ದಾರೆ. ಯು.ಟಿ ಖಾದರ್ ಅವರಿಗೂ ದೂರು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ರಚಿಸಿರುವ ಈ ಸಮಿತಿಯಲ್ಲಿ ಮುಸ್ಲಿಂ ಮುಖಂಡರಿಗೆ ಅವಕಾಶ ಕಲ್ಪಿಸಿಕೊಡದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.