Published
6 months agoon
By
Akkare Newsಯುವತಿಯೊಬ್ಬಳು ಇನ್ನೇನು ಸಪ್ತಪದಿ ತುಳಿದು ಹೊಸ ಬದುಕಿನ ಕನಸು ಕಾಣುತ್ತಾ ಸಂಭ್ರಮದಲ್ಲಿರುವಾಗಲೇ ವಿಧಿ ವಿಪರ್ಯಾಸವೆಂಬಂತೆ ಕೊನೆ ಉಸಿರೆಳೆದಿದ್ದಾಳೆ. ಮದುವೆಯ ಹಿಂದಿನ ದಿನ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ.
ಮೃತ ಯುವತಿ ಶ್ರೇಯಾ ಜೈನ್(28) ಎಂದು ಗುರುತಿಸಲಾಗಿದೆ. ದೆಹಲಿ ಮೂಲದವರಾದ ಶ್ರೇಯಾ ಕುಟುಂಬ ಡೆಹ್ರಾಡೂನ್‌ನ ಐಷಾರಾಮಿ ರೆಸಾರ್ಟೊಂದನ್ನು ಮದುವೆಯ ಸಂಭ್ರಮಾಚರಣೆಗಾಗಿ ಬುಕ್ ಮಾಡಿತ್ತು. ಆದರಂತೆ ಮದುವೆಗೂ ಎರಡು ದಿನಗಳ ಹಿಂದೆ ರೆಸಾರ್ಟ್ಗೆ ಬಂದಿದ್ದಾರೆ.
ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹಂದಿ ಕಾರ್ಯಕ್ರಮ ಆರಂಭವಾಗಿದೆ. ಆದರೆ ವಿಧಿ ವಿಪರ್ಯಾಸವೆಂಬಂತೆ ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಯುವತಿ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.