ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ನೀಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಗೆ ಮೋದಿ ಸರಕಾರವೇ ನೇರ ಹೊಣೆ : ಅಮಳ ರಾಮಚಂದ್ರ ಭಟ್

Published

on

ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಲೀಕ್ಗಳ ಸರಕಾರ. ಒಂದು ಕಡೆ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಲೀಕ್ ಆಗುತ್ತಿದ್ದರೆ ಇನ್ನೊಂದು ಕಡೆ ನೀಟ್ ಸರಣಿಯ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ವ್ಯಂಗ್ಯವಾಡಿದ್ದಾರೆ .
ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೀಟ್ ಯು. ಜಿ. ಪರೀಕ್ಷೆಯಲ್ಲಿ ಮೊದಲಿಗೆ ಪೇಪರ್ ಲೀಕ್ ನಡೆಯಿತು. ಬಳಿಕ ಅಂಕ ನೀಡುವಿಕೆಯಲ್ಲಿ ಅಕ್ರಮಗಳು ನಡೆದಿದ್ದು, ಇದರಿಂದ ದೇಶದ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದೆ. ಅಷ್ಟಕ್ಕೆ ನಿಲ್ಲದೇ, ನೀಟ್ ಪಿ. ಜಿ. ಯು.ಜಿ.ಸಿ.ನೆಟ್, ನೀಟ್ ಜಿ.ಆರ್.ಎಫ್. ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟ್ಟು ಇನ್ನಷ್ಟು ವಿದ್ಯಾರ್ಥಿಗಳು ಅತಂತ್ರಗೊಂಡಿದ್ದಾರೆ.

 

ಒಂದೇ ಒಂದು ಪರೀಕ್ಷೆ ಸರಿಯಾಗಿ ನಡೆಸಲಾಗದ ಸರ್ಕಾರ:
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೂ ಅತಿ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆನ್ನುವ ಉದ್ದೇಶದಿಂದ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರ 1994ರಲ್ಲಿ ಜಾರಿಗೆ ತಂದ ಸಿ.ಇ.ಟಿ ಯಾವುದೇ ಅಡೆತಡೆಗಳಿಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದು ಬಂದಿದೆ. ಸಿ.ಇ.ಟಿ.ಯ ಇತಿಹಾಸದಲ್ಲಿ ಇಂದಿನವರೆಗೆ ಒಂದೇ ಒಂದು ಸಾರಿಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಿದರ್ಶನಗಳಿಲ್ಲ. ಆದರೆ ಕಳೆದ ಹತ್ತು ವರ್ಷಗಳ ಬಿಜೆಪಿ ಸರಕಾರದ ಅವಧಿಯಲ್ಲಿ ನೀಟ್ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ಅವ್ಯವಸ್ಥೆಯ ಆಗರವಾಗಿದೆ ಎಂದರು.

5 ವರ್ಷದಲ್ಲಿ 41 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ
ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರ ನಡೆಸಿದ 41 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ಈ ಬಾರಿಯೂ ನೀಟ್ ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ಸುಮಾರು 30 ರಿಂದ 50 ಲಕ್ಷದವರೆಗೆ ಈ ಕಾಳ ದಂಧೆಯಲ್ಲಿ ಮಾರಾಟವಾಗಿವೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 67 ಮಂದಿಯಲ್ಲಿ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಈ ಪರೀಕ್ಷೆಗಳಲ್ಲಿ ನಡೆದ ಅಕ್ರಮವನ್ನು ಸಾಬೀತುಪಡಿಸಿದ್ದಾರೆ

 

 

ವಿದ್ಯಾರ್ಥಿಗಳ ಸ್ಥಿತಿ ಅತಂತ್ರ
ಪರೀಕ್ಷಾ ಫಲಿತಾಂಶ ಬಂದರೂ ವಿದ್ಯಾರ್ಥಿಗಳ ಸ್ಥಿತಿ ಇನ್ನೂ ಅತಂತ್ರವಾಗಿದೆ. ನೀಟ್ ಪರೀಕ್ಷೆಯ ಕೌನ್ಸಿಲಿಂಗ್ ಆರಂಭವಾಗದೆ ಸಿ.ಇ.ಟಿ.ಯ ಕೌನ್ಸೆಲಿಂಗ್ ಆರಂಭವಾಗುವುದಿಲ್ಲ. ಹೀಗಾಗಿ ಕೇವಲ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾತ್ರ ಅಲ್ಲ, ಸಿ.ಇ.ಟಿ. ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಕೂಡ ಈ ನೀಟ್ ಅಕ್ರಮದಿಂದ ತೊಂದರೆಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಯುಜಿಸಿ ನೀಟ್, ನೀಟ್ ಪಿ.ಜಿ. ನೆಟ್ ಜಿ.ಆರ್.ಎಪ್. ಸಿ.ಎಸ್.ಆರ್.ಎಪ್. ಪರೀಕ್ಷೆಗಳು ರದ್ದಾಗಿವೆ. .

ಜೂನ್ 14ಕ್ಕೆ ನಿಗದಿಯಾಗಿದ್ದ ನೀಟ್ ಪರೀಕ್ಷೆ ಫಲಿತಾಂಶವನ್ನು 10 ದಿನ ಮುಂಚಿತವಾಗಿ ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದೇ ಅಂದ್ರೆ ಜೂನ್ ನಾಲ್ಕಕ್ಕೆ ಬಹಿರಂಗ ಪಡಿಸಿದ ಉದ್ದೇಶವಾದರೂ ಏನು? ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ಮಂದಿಗೆ 720ಕ್ಕೆ 720 ಅಂಕಗಳು ಬಂದುದಾದರೂ ಹೇಗೆ? ಪರೀಕ್ಷೆ ಬರೆದ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಗ್ರೇಸ್ ಮಾರ್ಕ್ ನೀಡಿದ ಕಾರಣವಾದರೂ ಏನು? ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ಈ ವಿಚಾರದಲ್ಲಿ ಬಾಯಿ ಮುಚ್ಚಿ ಕುಳಿತಿದ್ದು, ಇಡೀ ಬಿಜೆಪಿ ಸರಕಾರವೇ ಪರೀಕ್ಷಾ ಮಾಫಿಯಾಕ್ಕೆ ಮಣಿದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

ದೇಶದ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರವರು ಆರಂಭದಲ್ಲಿ ನೀಟ್ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿಲ್ಲ ಎಂದು ಹೇಳಿದ್ದು ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆಗಳು ಪಡೆದಿದ್ದ ವಿದ್ಯಾರ್ಥಿಗಳ ತಪ್ಪೊಪ್ಪಿಗೆ ಹೇಳಿಕೆಯ ನಂತರ ಮೌನಕ್ಕೆ ಶರಣಾಗಿದ್ದಾರೆ. ಈಗ ಆದೇಶಿಸಿರುವ ಸಿ.ಬಿ.ಐ. ತನಿಖೆ ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ನಡೆದರೆ ಮಾತ್ರ ಈ ಬೃಹತ್ ಹಗರಣದ ಹಿಂದಿರುವ ಕೇಂದ್ರದ ಕಾಣದ ಕೈಗಳು ಸ್ಪಷ್ಟವಾಗಿ ಗೋಚರಿಸಲಿವೆ. ಎಂದರು
ರಂಜಿತ್ ಬಂಗೇರ, ಮೌನೀಶ್ ಮಸ್ಕರೇನಿಯಸ್, ರವೀಂದ್ರ ನೆಕ್ಕಿಲು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಪತ್ರಿಕಾಗೋಷ್ಟಿಯಲ್ಲಿ  ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement