Published
6 months agoon
By
Akkare Newsವಿಧಾನಸಭೆ ಚುನಾವಣೆಗೆ ಇನ್ನೂ ಹಲವು ತಿಂಗಳು ಬಾಕಿ ಇರುವಾಗಲೇ ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಯಲ್ಲಿ ಸಣ್ಣ ಮಟ್ಟದ ಅಪಸ್ವರ ಕಾಣಿಸಿಕೊಂಡಿದೆ. ಮೈತ್ರಿಕೂಟಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸುವ ಶಿವಸೇನಾ ಯುಬಿಟಿಯ ಪ್ರಸ್ತಾಪವನ್ನು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಶನಿವಾರ ತಿರಸ್ಕರಿಸಿದ್ದಾರೆ.
“ಸಮ್ಮಿಶ್ರವು ಸಾಮೂಹಿಕ ಮುಖವನ್ನು ಪ್ರತಿನಿಧಿಸುತ್ತದೆ” ಎಂದಿರುವ ಪವಾರ್, ಒಬ್ಬ ವ್ಯಕ್ತಿಯನ್ನು ಗುರುತಿಸುವ ಕಲ್ಪನೆಯನ್ನು ತಿರಸ್ಕರಿಸಿದರು. ಈ ಹೇಳಿಕೆಯು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಇರಿಸಲು ಶಿವಸೇನೆ ಯುಬಿಟಿಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.
ಪವಾರ್ ನಿಲುವಿನ ಬಗ್ಗೆ ಸಂಜಯ್ ರಾವುತ್ ಪ್ರತಿಕ್ರಿಯೆ
ವರದಿಯ ಪ್ರಕಾರ, ಪವಾರ್ ಅವರ ನಿಲುವಿಗೆ ಪ್ರತಿಕ್ರಿಯಿಸಿದ ರಾವತ್, ಶರದ್ ಪವಾರ್ ಹೇಳಿದ್ದು ಸರಿ ಎಂದು ಒಪ್ಪಿಕೊಂಡರು. ಮಹಾರಾಷ್ಟ್ರ ವಿಕಾಸ್ ಅಘಾಡಿ ಬಹುಮತವನ್ನು (ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ) ಸಾಧಿಸಲಿದೆ ಎಂದು ಅವರು ದೃಢಪಡಿಸಿದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ, ಅದು ಇಂಡಿಯಾ ಮೈತ್ರಿಕೂಟಕ್ಕೆ ದೇಶಾದ್ಯಂತ 25 ರಿಂದ 30 ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಹಾಯ ಮಾಡಬಹುದಿತ್ತು ಎಂದು ಅವರು ಹೇಳಿದ್ದಾರೆ.
“ಇದು ನಮ್ಮ ಅಭಿಪ್ರಾಯ; ಯಾವುದೇ ಸರ್ಕಾರ ಅಥವಾ ಸಂಸ್ಥೆ ಮುಖವಿಲ್ಲದೆ ಇರಬಾರದು. ಜನರು ಯಾರಿಗೆ ಮತ ಹಾಕುತ್ತಿದ್ದಾರೆಂದು ತಿಳಿದಿರಬೇಕು. ಜನರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ನರೇಂದ್ರ ಮೋದಿ ಅವರಿಗೆ ಮತ ಹಾಕಿದ್ದಾರೆ” ಎಂದು ರಾವತ್ ಹೇಳಿದ್ದಾರೆ.
ಎಂವಿಎಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀಡುವುದನ್ನು ನೀವು ಇನ್ನೂ ಬೆಂಬಲಿಸುತ್ತೀರಾ ಎಂದು ಕೇಳಿದಾಗ, “ಇದು ನಮ್ಮ ಅಭಿಪ್ರಾಯ. ಆದಾಗ್ಯೂ, ಎಂವಿಎ ಮೂರು ಪಕ್ಷಗಳನ್ನು ಒಳಗೊಂಡಿದೆ. ಮೂರೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಎಲ್ಲರೂ ನೋಡಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ” ಎಂದರು. ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಕನಿಷ್ಠ 175 ರಿಂದ 180 ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.