Published
5 months agoon
By
Akkare Newsಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿ ಶಿಫಾರಸು ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಆಗಸ್ಟ್ 1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ. ಇದರಿಂದ ನೌಕರರ ವೇತನ ಶೇಕಡಾ 10 ರಷ್ಟು ಹೆಚ್ಚಳವಾಗಿದೆ.ಸೋಮವಾರ ಸಂಜೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.
7 ನೇ ವೇತನ ಆಯೋಗವು ಶೇಕಡಾ 27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಹಿಂದಿನ ಸರ್ಕಾರ ದ ಅವಧಿಯಲ್ಲಿ ಶೇಕಡಾ 17 ರ ಮಧ್ಯಂತರ ಪರಿಹಾರ ನೀಡಲಾಗಿತ್ತು. ಈಗ ಉಳಿದ ಶೇಕಡಾ 10.5 ವೇತನ ಪರಿಷ್ಕರಣೆಯಾಗಲಿದೆ.
ವೇತನ ಆಯೋಗದ ಅಂತಿಮ ಶಿಫಾರಸ್ಸುಗಳು ಜಾರಿಯಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಲ್ಲಿ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12.20 ಲಕ್ಷ ನೌಕರ ಕುಟುಂಬಗಳಿಗೆ ಅನುಕೂಲವಾಗಲಿದೆ.
ಸಂಪನ್ಮೂಲ ಕೊರತೆ ಕಾರಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಭರಿಸಲು ಸಾಧ್ಯವಿಲ್ಲಎಂಬ ಹಣಕಾಸು ಇಲಾಖೆ ತಕರಾರು ಕಾರಣಕ್ಕೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರ ಹಿಂದೇಟು ಹಾಕಿತ್ತು. ಹಾಗಾಗಿ ಸರ್ಕಾರಿ ನೌಕರರು ಅಸಮಾಧಾನಗೊಂಡಿದ್ದರು. ವೇತನ ಆಯೋಗದ ವರದಿಯ ಯಥಾವತ್ ಜಾರಿಗೆ ಆಗ್ರಹಿಸಿ ಈ ತಿಂಗಳ 29ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ನೌಕರ ಸಂಘಟನೆಗಳ ಪ್ರತಿನಿಧಿಗಳು ಕಳೆದ ಶುಕ್ರವಾರ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು
ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಸಂಪುಟ ಅಸ್ತು ನೀಡಿದೆ. ಆದರೆ, ವೇತನ ಪರಿಷ್ಕರಣೆ ಪೂರ್ವಾನ್ವಯ ಜಾರಿಯಾಗಬೇಕು ಎಂಬ ನೌಕರರ ಬೇಡಿಕೆಗೆ ಮಾನ್ಯತೆ ಸಿಕ್ಕಿಲ್ಲ. ಜತೆಗೆ ನೌಕರ ಸಮುದಾಯದ ಇನ್ನೂ ಎರಡು ಪ್ರಮುಖ ಬೇಡಿಕೆಗಳ ವಿಚಾರದಲ್ಲಿಯಾವುದೇ ನಿರ್ಧಾರ ಕೈಗೊಂಡಿಲ್ಲ. ಎನ್‌ಪಿಎಸ್ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂಬ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.