Published
5 months agoon
By
Akkare Newsಬೆಂಗಳೂರು::ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ ಮಾಡುವಾಗ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭೂ ಮಾಲಕರಿಗೆ ಪಾವತಿ ಮಾಡಬೇಕಿರುವ ಪರಿಹಾರ ಬಿಡುಗಡೆಗೆ ಅನುದಾನ ಲಭ್ಯವಾದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಜಮೀನನ್ನು ನೇರ ಖರೀದಿ ಮಾಡುವ ಮೂಲಕ ಭೂ ಮಾಲಕರಿಂದ ಪಡೆದುಕೊಳ್ಳುವ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಯಿಂದ ತಹಶೀಲ್ದಾರ್ ಗೆ ಸಲ್ಲಿಸಿದ್ದು, ದರ ನಿಗದಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಒಂದು ಕಟ್ಟಡ ಕಾಮಗಾರಿಗೆ 84.21 ಲಕ್ಷ ರೂ.ಪರಿಹಾರ ಮೊತ್ತ ನಿಗದಿಯಾಗಿದ್ದು, ಭೂ ಮಾಲಕರು ದಾಖಲೆಗಳು ಸಲ್ಲಿಸಲು ಬಾಕಿ ಇರುವುದರಿಂದ ಭೂ ಪರಿಹಾರ ಪಾವತಿಯಾಗಿಲ್ಲ. ಇನ್ನೂ ನಾಲ್ಕು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 1.74 ಕೋಟಿ ರೂ.ಪರಿಹಾರ ಮೊತ್ತ ನಿಗದಿಯಾಗಿದ್ದು, ಇದರಲ್ಲಿ 1.38 ಕೋಟಿ ರೂ.ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಬಾಕಿ ಇರುವ 36.17 ಲಕ್ಷ ರೂ.ಮೊತ್ತವನ್ನು ಅನುದಾನ ಲಭ್ಯವಾದಂತೆ ಬಿಡುಗಡೆ ಕ್ರಮ ವಹಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.