Published
5 months agoon
By
Akkare Newsಮಂಗಳೂರು: ತುರ್ತುಪರಿಸ್ಥಿತಿ ಹೇರಿಕೆಯಿಂದ ದ.ಕ.ಜಿಲ್ಲೆಯ ಯಾವುದೇ ದುರ್ಬಲ ವರ್ಗದವರಿಗೆ ತೊಂದರೆಯಾಗಿಲ್ಲ. ಬದಲಾಗಿ ಪ್ರಗತಿಪರ ಕಾರ್ಯಕ್ರಮಗಳು ಯಥಾವತ್ತಾಗಿ ಜಾರಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಿರಂತರವಾಗಿ ತಪ್ಪು ಹುಡುಕಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ಉಳಿಸಬೇಕೆನ್ನುವ ಮಾತು ಬಂದಾಗ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯನ್ನು ಬಿಜೆಪಿ ನೆನಪು ಮಾಡುತ್ತಿದೆ. ಆದರೆ ತುರ್ತುಪರಿಸ್ಥಿತಿ ಕಾಲದಲ್ಲಿ ಜಿಲ್ಲೆಯಲ್ಲಿ ಇಂದಿರಾ ಗಾಂಧಿಯವರ ಭೂಮಸೂದೆ ಕಾನೂನು, ಬ್ಯಾಂಕ್ ರಾಷ್ಟ್ರೀಕರಣ, ಬಸ್ ರಾಷ್ಟ್ರೀಕರಣ, ಋಣ ಪರಿಹಾರ ಕಾನೂನು, ಉಳ್ಳವರ ಕುಮ್ಕಿಭೂಮಿಯ ಹಕ್ಕನ್ನು ವಜಾಗೊಳಿಸಿ ಬಡವರಿಗೆ 5ಸೆಂಟ್ಸ್‌ನಂತೆ ಹಂಚಿಕೆ ಮೊದಲಾದವುಗಳು ಪರಿಣಾಮಕಾರಿಯಾಗಿ ಜಾರಿಯಾಯಿತು.
ಆದ್ದರಿಂದ ತುರ್ತುಪರಿಸ್ಥಿತಿ ಕಾಲದಲ್ಲಿ ದ.ಕ.ಜಿಲ್ಲೆಗೆ ಬಹಳ ಅನುಕೂಲವೇ ಆಗಿದೆ ಎಂದು ಅವರು ಹೇಳಿದರು. ಕುಮ್ಕಿ ಭೂಮಿಯನ್ನು ಸರಕಾರ ಲೀಸ್ ಆಧಾರದಲ್ಲಿ ಗುತ್ತಿಗೆ ಕೊಡುವ ವಿಚಾರದಲ್ಲಿ ಮಾತನಾಡಿದ ಅವರು, ರಬ್ಬರ್, ಕಾಫಿ, ಏಲಕ್ಕಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾರಣಕ್ಕಾಗಿ ಸರಕಾರ ಕುಮ್ಕಿ ಜಾಗವನ್ನು ಗುತ್ತಿಗೆ ಕೊಡಲು ಹೊರಟಿದೆ. ಬಿಜೆಪಿಯವರಿಗೆ ಮಾಹಿತಿಯ ಕೊರತೆಯಿದೆ. 94ಇ ಯಲ್ಲಿ ಕೃಷಿಕರಿಗೆ ಗುತ್ತಿಗೆ ಕೊಡುವಂತಹ ಅವಕಾಶ ಕೊಡಲಾಗುತ್ತದೆ. ಭೂಮಸೂದೆ, ಭಗರ್ ಹುಕೂಂ, 94ಸಿ ಮೊದಲಾದ ಕಾಯ್ದೆಯಡಿ ಬಡವರಿಗೆ ಭೂಮಿಯನ್ನು ಕೊಟ್ಟ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಿಜೆಪಿ ತಮ್ಮ ಅವಧಿಯಲ್ಲಿ ಬಡವರಿಗೆ ಎಲ್ಲಿ ಭೂಮಿ ಕೊಟ್ಟಿದೆ ಎಂದು ರಮಾನಾಥ ರೈ ಪ್ರಶ್ನಿಸಿದರು