Published
5 months agoon
By
Akkare News
ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಕೊಲೆ ಆರೋಪಿ ಶಿವಮೊಗ್ಗದ ಸಾಗರ ಮೂಲದ ಸೃಜನ್ನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನನ್ನು ಮದುವೆಯಾಗುವಂತೆ ಸೌಮ್ಯ ಸೃಜನ್ ನನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಸೃಜನ್ ಸೌಮ್ಯಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಕೊಲೆ ಬಳಿಕ ಸೃಜನ್ ಸೌಮ್ಯಳ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದನು. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದು ಪೊಲೀಸರ ತನಿಖೆಯಿಂದ ವಿಚಾರ ಬೆಳಕಿಗೆ ಬಂದಿದೆ.
ಸೌಮ್ಯ ತೀರ್ಥಹಳ್ಳಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಜುಲೈ 2ರಂದು ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾಳೆ. ಈಗ ಬೇಡ, ಮನೆಯಲ್ಲಿ ಜಗಳವಾಗುತ್ತದೆ. ಸದ್ಯ ಮನೆಗೆ ಹೋಗು ಮುಂದೆ ನೋಡೋಣಾ ಎಂದು ಸಮಾಧಾನ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪದಲ್ಲಿ ಸೃಜನ್ ಸೌಮ್ಯಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಮುಂಬಾಳು ಬಳಿ ಹೂತಿಟ್ಟಿದ್ದಾನೆ.
ಮಗಳು ಮನೆಗೆ ಬರದಿದ್ದಾಗ ಆತಂಕ ಕೊಂಡ ಪೋಷಕರು ಕೊಪ್ಪ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರ ವಿಚಾರಣೆ ವೇಳೆ ತನ್ನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದು ಯುವತಿಯನ್ನು ಕೊಂದು ಹೂತಿಟ್ಟಿದ್ದಾಗಿ ಸೃಜನ್ ಬಾಯಿ ಬಿಟ್ಟಿದ್ದಾನೆ. ಇನ್ನು ಪೊಲೀಸರು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.