Published
5 months agoon
By
Akkare Newsಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಬಾರಿಗೆ ಬಾಗಿನ ಅರ್ಪಿಸಿದರು.
ಮಧ್ಯಾಹ್ನ 12.20ಕ್ಕೆ ಜಲಾಶಯದ ಕಾವೇರಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಡಾ.ಎಚ್.ಸಿ. ಮಹದೇವಪ್ಪ, ವೆಂಕಟೇಶ್, ಶಾಸಕರಾದ ತನ್ವಿರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿ ಕುಮಾರ್ ಗಣಿಗ, ಕದಲೂರುಉದಯ್, ದರ್ಶನ್ ಧ್ರುವನಾರಾಯಣ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಡಿಸಿ ಡಾ.ಕುಮಾರ, ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.
ಬಳಿಕ ಜಲಾಶಯದ ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸದೆ ನೇರವಾಗಿ ವೇದಿಕೆಗೆ ಬಂದರು.
ಮಳೆ ಕೊರತೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಕಳೆದ ವರ್ಷ ಕೆಆರ್ ಎಸ್ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ ಆಷಾಢ ಮಾಸದಲ್ಲಿ ಮುಂಗಾರು ಮಳೆ ಉತ್ತಮವಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿಯಾಗಿದ್ದು ಆ ಹಿನ್ನೆಲೆಯಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ವೇಳೆ ಸಂಭ್ರಮ ಮನೆ ಮಾಡಿತ್ತು.
ಜಲಾಶಯದ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳ ಹಾರಾಟ ಭಾಷಾಭಿಮಾನದ ಜೊತೆಗೆ ಕನ್ನಡಿಗರ ಮನ ತಣಿಸಿತು. ಕಣ್ಣು ಹಾಯಿಸುವ ಉದ್ದಕ್ಕೂ ಕನ್ನಡ ಬಾವುಟ ರಾರಾಜಿಸಿದವು. ತಳಿರು ತೋರಣಗಳ ಸಿಂಗಾರ ಬಾಗಿನಕ್ಕೆ ಮೆರಗು ನೀಡಿದರೆ ಜಲಾಶಯದ ಕೆಳ ಭಾಗದಲ್ಲಿರುವ ಅಲಂಕೃತ ಕಾವೇರಿ ಮಾತೆ ಕಣ್ಮನ ಸೆಳೆಯಿತು.