ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಸರಕಾರಿ ಕಛೇರಿ, ಶಾಲಾ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ-ಸ್ಪೀಕರ್ ಯು.ಟಿ ಖಾದರ್‌ಗೆ ಮನವಿ

Published

on

ಪುತ್ತೂರು: ಭಾರತೀಯ ಸಂವಿಧಾನ ಪೀಠಿಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಸರಕಾರಿ ಕಛೇರಿ, ಅರೆ ಸರಕಾರಿ ಕಛೇರಿ, ಶಾಲೆ, ಕಾಲೇಜು, ನ್ಯಾಯಾಲಯ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ ಹಾಗೂ ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ ಜನಾರ್ದನ್ ಬಿ.ರವರನ್ನು ಒಳಗೊಂಡ ದಕ್ಷಿಣ ಕನ್ನಡದ ನಿಯೋಗ ಜು.೨೭ ರಂದು ಮಂಗಳೂರಿನಲ್ಲಿ ಮನವಿ ಮಾಡಿದೆ.

 

ಸಂವಿಧಾನ ಆಶಯ ಮತ್ತು ಗುರಿಯನ್ನು ವಿವರಿಸುವ ಸಂವಿಧಾನದ ಮುಕುಟದಂತಿರುವ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಕಡೆಗಳಲ್ಲೂ ಅಳವಡಿಸಬೇಕು, ಇದರಿಂದಾಗಿ ಸಂವಿಧಾನದ ಜಾಗೃತಿ ಮೂಡಿಸಿದಂತಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಪತ್ರಕರ್ತ ಸಿಶೇ ಕಜೆಮಾರ್, ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಬಡಗನ್ನೂರು ಅವರನ್ನು ಒಳಗೊಂಡ ನಿಯೋಗ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಪರ ಜಿಲ್ಲಾ ಅಪರ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ, ಮಂಗಳೂರು ಮಹಾನಗರಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.

 

ಶೀಘ್ರದಲ್ಲೇ ಆದೇಶ: ಯು.ಟಿ.ಖಾದರ್
ಮನವಿ ಬಗ್ಗೆ ಪೂರಕ ಸ್ಪಂದನೆ ನೀಡಿದ ಸಭಾಧ್ಯಕ್ಷ ಯು.ಟಿ ಖಾದರ್‌ರವರು ಇದೊಂದು ಬಹಳ ಒಳ್ಳೆಯ ವಿಷಯವಾಗಿದೆ. ಅಂಬೇಡ್ಕರ್ ಭಾವಚಿತ್ರದೊಂದಿಗೆ ಸಂವಿಧಾನದ ಪೀಠಿಕೆಯನ್ನು ಪ್ರತಿ ಸರಕಾರಿ ಕಛೇರಿ ಸೇರಿದಂತೆ ಶಾಲೆ, ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅಳವಡಿಸುವ ಮೂಲಕ ಸಂವಿಧಾನಕ್ಕೆ ಉನ್ನತ ಮಟ್ಟದಲ್ಲಿ ಗೌರವ ನೀಡಿದಂತೆ ಆಗುತ್ತದೆ. ಈ ಬಗ್ಗೆ ನಾನು ಕೂಡಲೇ ಕ್ರಮ ವಹಿಸುತ್ತೇನೆ ಮತ್ತು ನೋಟೀಸ್ ನೀಡುವ ಬಗ್ಗೆಯೂ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

 

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರಿಗೆ ಮನವಿ
ಇದೇ ಮನವಿಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರವರಿಗೂ ಜು.೨೮ ರಂದು ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ ಜನಾರ್ದನ್ ಬಿ.ರವರು ಸಲ್ಲಿಸಿದರು. ಮನವಿಗೆ ಸ್ಪಂದನೆ ನೀಡಿದ ಐವನ್ ಡಿ’ಸೋಜಾರವರು ಇದೊಂದು ಬಹಳ ಉತ್ತಮ ಮನವಿಯಾಗಿದೆ. ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ನಾವೆಲ್ಲರೂ ಪ್ರತಿನಿತ್ಯ ಗೌರವ ಕೊಡಬೇಕು ಈ ನಿಟ್ಟಿನಲ್ಲಿ ಸಂವಿಧಾನ ಪೀಠಿಕೆ ಮತ್ತು ಅಂಬೇಡ್ಕರ್ ಭಾವಚಿತ್ರ ಎಲ್ಲಾ ಕಡೆಗಳಲ್ಲಿ ಕಡ್ಡಾಯವಾಗಬೇಕು ಈ ಬಗ್ಗೆ ನಾನು ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ಚಾರಿತ್ರಿಕ ಬದಲಾವಣೆಗೆ ನಾಂದಿಯಾಗಲಿದೆ
ಸರಕಾರ ಈಗಾಗಲೇ ಹಲವಾರು ಯೋಜನೆಗಳ ಮೂಲಕ ಕ್ರಾಂತಿಕಾರಿಕ ಬದಲಾವಣೆಯನ್ನು ಜಾರಿಗೆ ತಂದಿದ್ದು ಒಂದು ವೇಳೆ ಸಂವಿಧಾನದ ಪ್ರಸ್ತಾವನೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣವನ್ನು ಕಡ್ಡಾಯಗೊಳಿಸಿದಲ್ಲಿ ಅದು ಒಂದು ಬಹುಮುಖ್ಯ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡಬಹುದಾಗಿದ್ದು ಇಂತಹ ಕಾರ್ಯಕ್ರಮವನ್ನು ನವೆಂಬರ್ ತಿಂಗಳ ೨೬ ನೇ ದಿನ ಸಂವಿಧಾನ ದಿನ ಆಚರಣೆಯ ಸಂದರ್ಭದಲ್ಲಿ ರಾಜ್ಯಾದಾದ್ಯಂತ ಅನಾವರಣ ಮಾಡಲು ಅಧಿಸೂಚನೆ ಹೊರಡಿಸಿದ್ದಲ್ಲಿ ರಾಜ್ಯದಲ್ಲಿ ಸಂವಿಧಾನದ ಕುರಿತು ಇನ್ನಷ್ಟು ಜಾಗೃತಿಯನ್ನು ಮೂಡಿಸಿದಂತಾಗುತ್ತದೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷ ಗೌರವವನ್ನು ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ರಾಜ್ಯವು ಪಾತ್ರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಈ ವಿಚಾರವನ್ನು ತಾವುಗಳು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮಾಡಲು ಕ್ರಮ ವಹಿಸುವಂತೆ ತಮ್ಮಲ್ಲಿ ಈ ಮೂಲಕ ಕೋರಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement