Published
5 months agoon
By
Akkare Newsಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಮಹಾರಾಷ್ಟ್ರ ಕೇಡರ್‌ನ 2022ನೇ ಬ್ಯಾಚ್‌ನ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಇಂದು (ಜು.31) ಅನೂರ್ಜಿತಗೊಳಿಸಿದೆ.
ಅಲ್ಲದೆ, ಪೂಜಾ ಅವರು ಜೀವನಪರ್ಯಂತ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ನಿರ್ಬಂಧ ವಿಧಿಸಿದೆ.
ಅಂಗವೈಕಲ್ಯ ಹಾಗೂ ಒಬಿಸಿ ಕೋಟಾ ದುರುಪಯೋಗಪಡಿಸಿದ್ದಾರೆ ಎಂಬ ಪೂಜಾ ಖೇಡ್ಕರ್ ವಿರುದ್ದದ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಯುಪಿಎಸ್‌ಸಿ ಹೇಳಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೂಜಾ ಅವರ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನೆಲೆ, ಅವರನ್ನು ವರ್ಗಾವಣೆ ಮಾಡಲಾಗಿತ್ತು. ಯುಪಿಎಸ್‌ಸಿ ಪೂಜಾ ವಿರುದ್ದ ನಾಗರಿಕ ಸೇವಾ ಪರೀಕ್ಷೆ(ಸಿಎಸ್‌ಇ) 2022ರ ನಿಯಮಗಳ ಅಡಿ ತನಿಖೆ ಕೈಗೊಂಡಿತ್ತು.ತಮ್ಮ ಮೇಲಿನ ಆರೋಪಗಳಿಗೆ ಜುಲೈ 25ರೊಳಗೆ ಉತ್ತರ ನೀಡುವಂತೆ ಪೂಜಾ ಅವರಿಗೆ ಯುಪಿಎಸ್‌ಸಿ ನೋಟಿಸ್ ನೀಡಿತ್ತು. ಆದರೆ, ಅವರು ಆಗಸ್ಟ್ 4ರವರೆಗೆ ಸಮಯ ವಿಸ್ತರಿಸುವಂತೆ ಕೋರಿದ್ದರು. ಅದಕ್ಕೆ ನಿರಾಕರಿಸಿದ್ದ ಯುಪಿಎಸ್‌ಸಿ ಜುಲೈ 30ರೊಳಗೆ ಉತ್ತರ ನೀಡುವಂತೆ ಆದೇಶಿಸಿತ್ತು. ನಿಗದಿತ ಅವಧಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಪೂಜಾ ನಿಗದಿತ ಅವಧಿಯಲ್ಲಿ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.
ಪೂಜಾ ಖೇಡ್ಕರ್ ವಿರುದ್ದ ಆರೋಪದ ತನಿಖೆ ವೇಳೆ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಯುಪಿಎಸ್‌ಸಿ ಪರಿಶೀಲಿಸಿದೆ. 2009 ಮತ್ತು 2023ರ ನಡುವೆ ಐಎಎಸ್ ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ತೇರ್ಗಡೆಯಾದ 15,000 ಕ್ಕೂ ಹೆಚ್ಚು ಅಭ್ಯರ್ಥಿಗಳ ಡೇಟಾವನ್ನು ಪರಿಶೀಲಿಸಲಾಗಿದೆ. ಈ ವೇಳೆ ಪೂಜಾ ಸುಳ್ಳು ಹೇಳಿರುವುದು ರುಜುವಾತಾಗಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಜೂನ್‌ನಲ್ಲಿ ಪುಣೆಯ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಪತ್ರ ಬರೆದು ಪೂಜಾ ಖೇಡ್ಕರ್ ವಿರುದ್ದ ಆರೋಪಗಳನ್ನು ಮಾಡಿದಾಗ ಅವರ ಕುರಿತು ಚರ್ಚೆಗಳು ಪ್ರಾರಂಭವಾಗಿತ್ತು. ಪ್ರೊಬೇಷನರಿ ಅಧಿಕಾರಿ ಪೂಜಾ ಅವರು ಕಾರು, ಸಿಬ್ಬಂದಿ ಮತ್ತು ಕಚೇರಿಯಂತಹ ಸವಲತ್ತುಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತನ್ನ ಪತ್ರದಲ್ಲಿ ಆರೋಪಿಸಿದ್ದರು. ನಂತರ ಪೂಜಾ ಅವರನ್ನು ವಾಶಿಮ್‌ಗೆ ವರ್ಗಾಯಿಸಲಾಗಿತ್ತು.