Published
4 months agoon
By
Akkare Newsಉಪ್ಪಿನಂಗಡಿ: ವಾಹನ ತಪಾಸಣೆ ವೇಳೆ ಆಟೋರಿಕ್ಷಾದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ಶುಕ್ರವಾರ ನಡೆದಿದೆ.
ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮೊಹಮ್ಮದ್ ನಾಸೀರ್ (24), ಪೆರಾಜೆ ಗ್ರಾಮದ ಏನಾಜೆ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್ .ಬಿ (21), ಮತ್ತು ಸಿನಾನ್ ಬಂಧಿತ ಆರೋಪಿಗಳು.
ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ಮತ್ತು ಸಿಬ್ಬಂದಿಗಳು ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇದೇ ಮಾರ್ಗವಾಗಿ ಬಂದ ಆಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಲಾಗಿದೆ. ಆದರೆ ಆಟೋ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ, ಬಳಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿ ವಾಹನದಲ್ಲಿದ್ದ ಚಾಲಕ ಮತ್ತು ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿರುತ್ತಾರೆ.
ನಂತರ ಆರೋಪಿಗಳನ್ನು ಹಿಡಿದು ವಿಚಾರಿಸಲಾಗಿ ಸಮರ್ಪಕವಾದ ಉತ್ತರ ನೀಡದಿರುವ ಹಿನ್ನೆಲೆಯಲ್ಲಿ ವಾಹನದ ದಾಖಲಾತಿಗಳನ್ನು ಹಾಗೂ ವಾಹನವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಟೋರಿಕ್ಷಾದಲ್ಲಿ ಸುಮಾರು 18,720 ರೂ. ಮೌಲ್ಯದ 9.36 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಮಾದಕ ವಸ್ತು ಮತ್ತು 15 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ ಗಳು ಪತ್ತೆಯಾಗಿರುತ್ತದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮಾದಕ ವಸ್ತುವನ್ನು, ಆಟೋರಿಕ್ಷಾವನ್ನು ಹಾಗೂ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ U/s 8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು ಸೆಕ್ಷನ್ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.