Published
4 months agoon
By
Akkare Newsಮಂಗಳೂರು: ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗಾಗಿ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಮಟ್ಟದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆದ ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ರಕ್ಷಣೆಯು ಬಹುಸಂಖ್ಯಾತ ಜನರ ಕರ್ತವ್ಯವೆಂದು ಭಾವಿಸಬೇಕು. ಸಕಲ ಮಾನವ ಸಂಕುಲ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳಲಿ ಎಂಬುದು ನಮ್ಮ ಸಂಕಲ್ಪ ಎಂದು ಸಚಿವರು ನುಡಿದರು.
ಜಿಲ್ಲೆಯಲ್ಲಿ ಇದೂವರೆಗೂ ವಾಡಿಕೆಗಿಂತ ಶೇ.15 ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ ಜೂನ್ 2024 ರಿಂದ ಇದೂವರೆಗೂ ಒಟ್ಟು 665 ಮನೆಗಳು ಹಾನಿಯಾಗಿದ್ದು, ಒಟ್ಟು 1.21 ಕೋಟಿ ರೂ. ಪರಿಹಾರವನ್ನು ಮನೆಹಾನಿ ಸಂತ್ರಸ್ತ ಫಲಾನುಭವಿಗಳಿಗೆ ಪಾವತಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಸ್ಥಿರ ಮೂಲ ಸೌಕರ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸುವಂತಹ ಆಕರ್ಷಕ ನಗರಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ನಗರದ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 2024ನೇ ಸಾಲಿನ ಮುಂಗಾರು ಅವಧಿಯನ್ನು ಜಿಲ್ಲಾಡಳಿತ ವತಿಯಿಂದ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿರುತ್ತದೆ.
ಮುಖ್ಯಮಂತ್ರಿಗಳ ಅಮೃತ್ ನಗರೋತ್ಮಾನ ಹಂತ-5 ರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 130 ಕೋಟಿ ಮಂಜೂರಾಗಿದ್ದು, 320 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಯೋಜನೆಗಳು, ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿವರ ನೀಡಿದರು.
ಇದಕ್ಕೂ ಮುನ್ನ ಪೊಲೀಸ್ ವಾದ್ಯವೃಂದ, ಸಂಚಾರಿ ಪೊಲೀಸ್, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಆರ್ ಎಸ್ ಪಿ ಬಾಲಕ-ಬಾಲಕಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳ ತಂಡಗಳು ಸೇರಿದಂತೆ ಒಟ್ಟು 16 ತಂಡಗಳಿಂದ ಸಚಿವರು ಗೌರವರಕ್ಷೆ ಸ್ವೀಕರಿಸಿದರು.
ವಿದ್ಯಾರ್ಥಿಗಳು, ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಮೇಯರ್ ಸುಧೀರ್ ಶೆಟ್ಟಿ, ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಪಶ್ಚಿಮ ವಲಯ ಐಜಿಪಿ ಬೋರಲಿಂಗಯ್ಯ, ಜಿಪಂ ಸಿಇಒ ಡಾ. ಆನಂದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.