ಮಹಾರಾಷ್ಟ್ರ: ಮುಂಬೈನ ವಿರಾರ್‌ನಲ್ಲಿ ಕೋಚಿಂಗ್ ಕ್ಲಾಸ್‌ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜನ ರಕ್ತ ಬರುವಂತೆ ಥಳಿಸಿದ ಘಟನೆ ವರದಿಯಾಗಿದೆ.
36 ವರ್ಷದ ಶಿಕ್ಷಕನಿಗೆ ಜನ ಬಟ್ಟೆ ಬಿಚ್ಚಿ ಬಾರಿಸಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, ಇದರ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾರ್‌ನ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಇಲ್ಲಿಗೆ ಕೋಚಿಂಗ್‌ಗೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ವಿಚಾರ ತಿಳಿದು ಸಿಟ್ಟಿಗೆದ್ದ ಜನ ಆತನನ್ನು ಕೋಚಿಂಗ್ ಸೆಂಟರ್‌ನಿಂದ ರಸ್ತೆಗೆಳೆದು ಆತನ ಶರ್ಟ್ ಬಿಚ್ಚಿ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.
ಶಿಕ್ಷಕ ವಿರಾರ್‌ನ ಮನ್ವೆಲ್‌ಪಡದಲ್ಲು ತನ್ನದೇ ಕೋಚಿಂಗ್ ಸೆಂಟರ್ ಹೊಂದಿದ್ದು ವಾರದಿಂದ ಕೋಚಿಂಗ್ ಸೆಂಟರ್‌ಗೆ ಬರುತ್ತಿದ್ದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ಈತನ ಕಿರುಕುಳದಿಂದಾಗಿ ಆತ ಕೋಚಿಂಗ್ ಸೆಂಟರ್‌ಗೆ ಹೋಗಲು ಒಪ್ಪುತ್ತಿರಲಿಲ್ಲ. ಕಳೆದ ಸೋಮವಾರದಿಂದ ಆಕೆ ಕೋಚಿಂಗ್‌ಗೆ ಹೋಗದೇ ಇರುವುದು ಪೋಷಕರ ಗಮನಕ್ಕೆ ಬಂದಿದ್ದು, ಈ ಕುರಿತು ಬಾಲಕಿಯನ್ನು ವಿಚಾರಿಸಿದಾಗ ಬಾಲಕಿ ವಿಚಾರ ಬಾಯ್ಬಿಟ್ಟಿದ್ದಾಳೆ.
ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕ ಅಸಭ್ಯವಾಗಿ ತನ್ನನ್ನು ಸ್ಪರ್ಶಿಸುತ್ತಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಬಳಿಕ ಸಿಟ್ಟಿಗೆದ್ದ ಬಾಲಕಿಯ ತಂದೆ ಹಾಗೂ ಮನೆಯವರು ಕೋಚಿಂಗ್ ಸೆಂಟರ್‌ಗೆ ಬಂದು ಶಿಕ್ಷಕನ ಕಾಲರ್ ಹಿಡಿದು ಹೊರಗೆ ಎಳೆದುಕೊಂಡು ಬಂದು ಆತನಿಗೆ ಬಾರಿಸಲು ಶುರು ಮಾಡಿದ್ದಾರೆ.
7ರಿಂದ 8 ಜನರಿದ್ದ ತಂಡ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಬಾರಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ವೇಳೆ ಇನ್ನೂ ಮೂರು ಬಾಲಕಿಯರು ಹತ್ತಿರ ಬಂದು ತಮಗೂ ಇದೇ ರೀತಿ ಆತ ಕಿರುಕುಳ ನೀಡಿದ್ದಾಗಿ ಹೇಳಿದ್ದಾರೆ. ಇದಾದ ನಂತರ ಈ ಕೋಚಿಂಗ್ ಕ್ಲಾಸ್‌ಗೆ ಬರುತ್ತಿದ್ದ 7 ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಮಕ್ಕಳು ಅಪ್ರಾಪ್ತರಾಗಿರುವುದರಿಂದ ಶಿಕ್ಷಕನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.