Published
4 months agoon
By
Akkare Newsಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ವತಿಯಿಂದ ದೇಶದ ಆರ್ಥಿಕತೆಯ ಪ್ರಮುಖ ಬೆನ್ನೆಲುಬು ಆಗಿರುವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮದ ಪುಣ್ಕೇದಡಿ ಎಂಬಲ್ಲಿ ಹಡೀಲು ಬಿದ್ದಿರುವ ಗದ್ದೆಯಲ್ಲಿ ಭತ್ತ ಕೃಷಿ ನಾಟಿ ಮಾಡುವ ಕಾರ್ಯಕ್ರಮದ ಅಂಗವಾಗಿ ಗದ್ದೆಯಲ್ಲಿ “ಸೇರೋಣ ವ್ಯವಸಾಯ ಮಾಡೋಣ” ವಿನೂತನ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ)ನ ಟ್ರಸ್ಟಿ ಲೋಕನಾಥ ಪೂಜಾರಿ ತಿಮರಾಜೆ ವ್ಯವಸಾಯ, ಚಟುವಟಿಕೆಗಳೇ ನಮ್ಮ ಭದ್ರ ದೇಶದ ಬೇರುಗಳು, ಕೃಷಿ ಚಟುವಟಿಕೆಗಳನ್ನೇ ಹಲವಾರು ಕುಟುಂಬಗಳು ಇಂದು ಜೀವನೋಪಾಯವನ್ನು ಅವಲಂಬಿಸಿವೆ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆದರೆ ವೈಜ್ಞಾನಿಕತೆಯು ಬೆಳೆದಂತೆಲ್ಲ ಕೃಷಿಯ ಸಾಂಪ್ರದಾಯಿಕ ಸುಗಡು ನಾಶಗೊಳ್ಳುತ್ತಿವೆ ಇದರಿಂದ ಹಿರಿಯರ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪದ್ಧತಿಗಳು ನಾಶವಾಗುತ್ತಿರುವುದು ಬೇಸರದ ಸಂಗತಿ.
ಆದರೆ ಈ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಹಲವಾರು ಕಾರ್ಯಕ್ರಮಗಳು ನಮ್ಮ ಮಧ್ಯೆ ನಡೆಯುತ್ತಿರುವುದಕ್ಕೆ ಉತ್ತಮ ಉದಾಹರಣೆ ಇಂತಹ ಕಾರ್ಯಕ್ರಮಗಳು, ನಮ್ಮ ಸಾಂಪ್ರದಾಯಿಕ ಪದ್ಧತಿಯಿಂದ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ರೈತನು ವ್ಯವಸಾಯದಲ್ಲಿ ತೊಡಗಿಸಿಕೊಂಡ ರೀತಿಯನ್ನು ಮುಂದಿನ ಜನಾಂಗಕ್ಕೆ ಸಾಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕೃಷಿಯ ಮಹತ್ವ ಹಾಗೂ ಕೃಷಿ ಮಾಡುವ ವಿಧಾನವನ್ನು ಮುಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸತತವಾಗಿ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಇದರಿಂದ ಬಂದ ಆದಾಯವನ್ನು ಟ್ರಸ್ಟಿನ ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದರು.
ಗದ್ದೆಯ ಮಾಲಕ ಶೀನಪ್ಪ ಪೂಜಾರಿ ಕಲ್ಲಾಜೆ ದೀಪ ಬೆಳಗಿಸಿ ನಾರಾಯಣ ಗುರು ವರ್ಯರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಕಾರ್ಯಕ್ರಮದ ಸಂಘಟಕರಿಗೆ ಬತ್ತದ ಕೃಷಿಗೆ ನೇಜಿಯನ್ನು ಹಸ್ತಾಂತರಿಸಿದರು.
ಬಲಿಕ ಗದ್ದೆಗೆ ಹಾಲು ಏರೆದು ಸ್ವತಃ ಒಂದು ಹಿಡಿ ನೇಜಿ ನಾಟಿ ಮಾಡಿ ಸಂಘಟಕರಿಗೆ ಕೃಷಿ ಮಾಡಲು ಗದ್ದೆಯನ್ನು ಬಿಟ್ಟುಕೊಟ್ಟರು.
ಸಂಘಟಕರಿಂದ ಗದ್ದೆ ಮಾಲಕ ಶೀನಪ್ಪ ಪೂಜಾರಿಯವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯರಾದ ಶಾಂತಪ್ಪ ಪೂಜಾರಿ ಪಚ್ಚಾಡಿಬೈಲ್, ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.) ನ ಗೌರವಾಧ್ಯಕ್ಷ ಮೋಹನ್ ಕುಮಾರ್ ಕಲ್ಲಾಜೆ, ಟ್ರಸ್ಟಿಗಳಾದ ಕೂಸಪ್ಪ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ಯುವವಾಹಿನಿ ಮಾಣಿ ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಬಾಕಿಲ, ಜಯಂತ್ ಬರಿಮಾರ್, ಕಡೇಶಿವಾಲಯ ಪಂಚಾಯತ್ ಪಂಚಾಯತ್ ಅಧ್ಯಕ್ಷೆ ಭಾರತಿ ರಾವ್,ಮಾಜಿ ಅಧ್ಯಕ್ಷ ಸುರೇಶ್ ಬನಾರಿ, ಯುವಶಕ್ತಿ ಕಡೇಶಿವಾಲಯ ಅಧ್ಯಕ್ಷ ದೇವಿಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ, ಪುರುಷರಿಗೆ ಮಹಿಳೆಯರಿಗೆ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಮಾಡಿ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕ್ರೀಡಾ ಕೂಟದ ಬಳಿಕ ಎಲ್ಲರೂ ಸೇರಿ ಸುಮಾರು 10 ಕಳಸೆ ಜಾಗದಲ್ಲಿ ಕೃಷಿ ನಾಟಿ ಮಾಡಿದರು.
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ವಿದ್ಯಾಧರ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಯಶವಂತ್ ಪತ್ತುಕೊಡಂಗೆ ವಂದಿಸಿದರು.