Published
4 months agoon
By
Akkare Newsಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂಧಿರಾ ಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಇದು ಅತ್ಯಂತ ನಿಷ್ಠುರವಾಗಿದೆ. ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಅರಣ್ಯ ಒತ್ತುವರಿ ತಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.
ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ 2022, 2023 ನೇ ಸಾಲಿನ ಪದಕ ವಿತರಿಸಿ ಮಾತನಾಡಿದರು.
ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. ಮಹಾತ್ಮಗಾಂಧಿಯವರು ಪ್ರಕೃತಿ ಪ್ರಿಯರಾಗಿದ್ದರು. “ಪ್ರಕೃತಿ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ಮನುಷ್ಯನ ದುರಾಸೆಗಳನ್ನು ಪೂರೈಸಲು ಆಗುವುದಿಲ್ಲ” ಎಂದು ಗಾಂಧಿ ಹೇಳಿದ್ದಾರೆ. ಇವತ್ತಿನ ಪರಿಸರದ ಅನಾಹುತಗಳಿಗೆ ಮನುಷ್ಯನ ದುರಾಸೆಯೇ ಕಾರಣ” ಎಂದರು.
“ಇಂದು ಪ್ರಶಸ್ತಿ ಸ್ವೀಕರಿಸಿದವರು ಉಳಿದವರಿಗೆ, ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಹಾರೈಸಿ, ಆಯಾ ವರ್ಷದ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು” ಎಂದು ಸೂಚಿಸಿದರು.
“ಸಚಿವ ಈಶ್ವರ್ ಖಂಡ್ರೆಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡುತ್ತಾರೆ. ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ. ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ” ಎಂದು ಹೇಳಿದರು.
ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಉಪಸ್ಥಿತರಿದ್ದರು.